ಬೆಳ್ತಂಗಡಿ, ಜೂ. 20 (DaijiworldNews/AA): ಮಗು ಸ್ನೇಹಿ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳ್ತಂಗಡಿ ತಾಲೂಕಿನ ಮಚ್ಚಿನ ಸರ್ಕಾರಿ ಪ್ರೌಢಶಾಲೆ ಬುಧವಾರ ಸಂಪೂರ್ಣ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬವಾದ ಚುನಾವಣೆಯ ವಿಚಾರವನ್ನು ಮನದಟ್ಟು ಮಾಡುವ ಉದ್ದೇಶದಿಂದ ತನ್ನ ಶಾಲಾ ಸಂಸತ್ ಅನ್ನು ವಿಭಿನ್ನವಾದ ಮಾದರಿ ಚುನಾವಣೆ ನಡೆಸಲಾಯಿತು.







ಯಾಕೆ ಗುಲಾಬಿ ಬಣ್ಣ...?
ಮತದಾನ ಪ್ರಕ್ರಿಯೆಯಲ್ಲಿ ಮಹಿಳಾ ಮತದಾರರ ಪಾತ್ರವೂ ಮಹತ್ತರವಾದುದು ಎನ್ನುವ ನಿಟ್ಟಿನಲ್ಲಿ ಕಳೆದ ಕೆಲವು ಚುನಾವಣೆಗಳಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿರುವ ಮತಗಟ್ಟೆಗಳನ್ನು ಪಿಂಕ್(ಸಖೀ) ಬೂತ್ ಗಳೆಂದು ಗುರುತಿಸಿ ಜಾಗೃತಿ ಮೂಡಿಸುವ ಕಾರ್ಯನಡೆಸುತ್ತಿದೆ.
ಇದೇ ಮಾದರಿಯನ್ನು ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಅನುಷ್ಠಾನ ಮಾಡಲಾಗಿದೆ. ಶಾಲೆಯ 9ನೇ ಹಾಗೂ 10ನೇ ತರಗತಿಯಲ್ಲಿ 96 ಬಾಲಕಿಯರು ಹಾಗೂ 76 ಬಾಲಕರು ಸೇರಿದಂತೆ ಒಟ್ಟು 172 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕ ವೃಂದ ಪಿಂಕ್ ಬೂತ್ ಮಾದರಿಯಲ್ಲಿ ಚುನಾವಣಾ ಮತಗಟ್ಟೆಯನ್ನು ನಿರ್ಮಿಸಿ, ಅಲಂಕರಿಸಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದ್ದಾರೆ.
ಚುನಾವಣಾಧಿಕಾರಿಯಿಂದ ತೊಡಗಿ ಮತಗಟ್ಟೆಯ ಎಲ್ಲಾ ಮಹಿಳಾ ಅಧಿಕಾರಿಗಳು ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದರು. ಮುಖ್ಯದ್ವಾರವನ್ನು ಗುಲಾಬಿ ಬಣ್ಣದ ಬೆಲೂನ್ ಹಾಗೂ ಬಟ್ಟೆಗಳಿಂದ ಶೃಂಗರಿಸಲಾಗಿತ್ತು. ಬಳಸಲಾದ ಟೇಬಲ್ ಹಾಗೂ ಕುರ್ಚಿಗಳಿಗೂ ಗುಲಾಬಿ ಬಣ್ಣದ ಬಟ್ಟೆ ಹಾಸಿ ಎಲ್ಲವೂ ಗುಲಾಬಿ ಬಣ್ಣ ಮಯವಾಗಿತ್ತು. ಚುನಾವಣೆಯಲ್ಲಿ ಮತ ಚಲಾಯಿಸಲು ಎಲ್ಲಾ ವಿದ್ಯಾರ್ಥಿ ಮತದಾರರಿಗೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿತ್ತು.
ಈ ಮೂಲಕ ಪ್ರಜಾಪ್ರಭುತ್ವದ ನಿಜವಾದ ಅಶಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದರ ಜೊತೆಗೆ, ನಿಜವಾದ ಚುನಾವಣಾ ಪ್ರಕ್ರಿಯೆಗಳ ಅನುಭವ ಸಿಗುವಂತೆ ಮತದಾನ ಪದ್ಧತಿಯನ್ನೂ ಪರಿಚಯಿಸಲಾಯಿತು.
ಜೂ.9 ಅಧಿಸೂಚನೆ ಪ್ರಕಟಣೆ, ಜೂ.11 ಕ್ಕೆ ನಾಮಪತ್ರ ಸಲ್ಲಿಕೆ, ಜೂ.12 ರಂದು ನಾಮಪತ್ರ ಪರಿಶೀಲನೆ, ಜೂ.13 ನಾಮಪತ್ರ ಹಿಂಪಡೆಯಲು ದಿನ ನಿಗದಿ, ಜೂ.17 ಚುನಾವಣಾ ಪ್ರಚಾರ ಹಾಗೂ ಜೂ.18 ಚುನಾವಣೆ, ಅಪರಾಹ್ನ ಮತ ಎಣಿಕೆ, ಫಲಿತಾಂಶ ಪ್ರಕಟ ಸಹಿತ ಪ್ರಮಾಣವಚನವರೆಗಿನ ಪ್ರಕ್ರಿಯೆಗಳನ್ನು ನಿಖರವಾಗಿ ಅನುಸರಿಸಲಾಯಿತು. ಪ್ರಾಯೋಗಿಕವಾಗಿ ಇವಿಎಂ ಆ್ಯಪ್ ಬಳಸಿ ಮತದಾನ ಮಾಡಲಾಯಿತು.
ನಾಲ್ವರು ಸ್ಪರ್ಧೆ: ಶೇ.95 ಮತದಾನ ಪ್ರೌಢಶಾಲೆಯ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ನೋಟ ಮತ ಚಲಾವಣೆಗೂ ಅವಕಾಶ ನೀಡಲಾಗಿತ್ತು.
ಶಾಲೆಯ ಒಟ್ಟು 172 ವಿದ್ಯಾರ್ಥಿ ಮತದಾರರ ಪೈಕಿ, 164 ಮಂದಿ ಮತಚಲಾಯಿಸಿದ್ದಾರೆ. ಈ ಮೂಲಕ 95 ಶೇಕಡಾ ಮತದಾನವಾಗಿದೆ.
ಮತ ಎಣಿಕೆ ನಡೆದು ಈ ಚುನಾವಣೆ ಫಲಿತಾಂಶದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಯಜ್ಞೇಶ್ ಅವರು 54 ಮತ ಪಡೆದು ವಿದ್ಯಾರ್ಥಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದು, 41 ಮತ ಪಡೆದ ಆಸೀರಾ ಬಾನು ವಿರೋಧ ಪಕ್ಷದ ನಾಯಕಿಯಾದರು. ಸ್ಪರ್ಧೆ ನೀಡಿದ್ದ ಪ್ರಥ್ವಿಕ್ 39 ಹಾಗೂ ಅಶ್ವಿಜ 27 ಮತಗಳನ್ನು ಪಡೆದರೆ, 3 ನೋಟಾದ ಮತಗಳು ಚಲಾವಣೆಯಾಗಿದೆ.
ಇದೇ ವೇಳೆ ಮಂತ್ರಿಮಂಡಲದ ಉಳಿದ ಸ್ಥಾನಗಳಿಗೆ ಸಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರಮಾಣವಚನ ಬೋಧಿಸಲಾಯಿತು.
ಈ ಸಂಪೂರ್ಣ ಪ್ರಕ್ರಿಯೆಗೆ ಸಮಾಜ ವಿಜ್ಞಾನ ಶಿಕ್ಷಕರಾದ ವೆಂಕಪ್ಪ ಬಿ. ಅವರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಎಸ್. ಪ್ರಕಾಶ್ ನಾಯ್ಕ್ ರವರು ಮಾರ್ಗದರ್ಶನ ನೀಡಿದವರು. ಅವರು ಮತದಾನದ ಪ್ರಾಮುಖ್ಯತೆಯ ಕುರಿತು ಮಕ್ಕಳಿಗೆ ಉತ್ಸಾಹದ ಮಾತುಗಳನ್ನು ನೀಡಿದರು. ಕಾರ್ಯಕ್ರಮದ ವೀಕ್ಷಕರಾಗಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹೊನ್ನಪ್ಪ ಸಾಲಿಯನ್ ಭಾಗವಹಿಸಿದರೆ, ಶಿಕ್ಷಕರಾದ ಶಿವಾಯಿನಿ ಶೇಟ್, ಲೀನಾ ಸೆರಾವೋ, ಸುಭಾಷಚಂದ್ರ ಪೂಜಾರಿ, ಸುರೇಶ್ ಎಂ, ದುರ್ಗಪ್ರಸಾದ್ ಜಿ, ಅವಿನಾಶ, ವಿ. ಚಂದಪ್ಪ ಪೂಜಾರಿ ಮತ್ತಿತರರು ಸಹಕಾರ ನೀಡಿದರು.
ಅಡುಗೆ ಸಿಬ್ಬಂದಿಗಳಾದ ಶೀಲಾ, ಕುಸುಮ, ರೇವತಿ, ಕಚೇರಿ ಗುಮಾಸ್ತೆ ಕು.ತೇಜಸ್ವಿ ಹಾಗೂ ವಿದ್ಯಾರ್ಥಿಗಳ ಉತ್ಸಾಹಮಯ ಭಾಗವಹಿಸುವಿಕೆ ಚುನಾವಣಾ ಚಟುವಟಿಕೆಗೆ ಹೊಸ ಮೆರುಗು ನೀಡಿತು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ತಂತ್ರಜ್ಞಾನದ ಬಳಕೆ ಹೊಸತನ ತುಂಬಿದೆ. ಆದರೆ ಮಚ್ಚಿನ ಸರ್ಕಾರಿ ಪ್ರೌಢಶಾಲೆ ಸಖಿ(ಪಿಂಕ್)ಬೂತ್ ನ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಅರ್ಥೈಸಲು ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ಮಾದರಿಯಾಗಿ ನಡೆಸಿರುವುದು ಚುನಾವಣಾ ಆಯೋಗದ ಆಶಯವನ್ನು ಎತ್ತಿಹಿಡಿದಂತಾಗಿದೆ.
ಮಕ್ಕಳಿಗೆ ಮಹಿಳಾ ಮತದಾರರ ಬಗ್ಗೆಯೂ ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ನಮ್ಮ ಶಾಲೆಯಲ್ಲಿ 'ಪಿಂಕ್ (ಸಖೀ) ಬೂತ್' ಪರಿಕಲ್ಪನೆಯನ್ನು ಜಾರಿಗೆ ತಂದೆವು. ಮತಗಟ್ಟೆ ಸಂಪೂರ್ಣ ಗುಲಾಬಿ ಬಣ್ಣದಿಂದ ಅಲಂಕರಿಸಲ್ಪಟ್ಟು, ಮತದಾನ ಅಧಿಕಾರಿಯಾಗಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸಿದ್ದು, ನೈಜ ಚುನಾವಣೆ ಪ್ರಕ್ರಿಯೆಯ ಅನುಭೂತಿಯನ್ನು ವಿದ್ಯಾರ್ಥಿಗಳು ಅನುಭವಿಸಿದರು ಎಂದು ಮಚ್ಚಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಪ್ರಕಾಶ ನಾಯ್ಕ ತಿಳಿಸಿದ್ದಾರೆ.