ಬಂಟ್ವಾಳ, ಜೂ. 21 (DaijiworldNews/AA): ಕಳೆದ ವಾರ ಬಂಟ್ವಾಳ ಸಜಿಪನಡು ಎಂಬಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ, ಘಟನಾ ಸ್ಥಳದ ಸಮೀಪ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಿಗೂ ದೂರುದಾರರು ನೀಡಿರುವ ದೂರಿಗೂ ವ್ಯತ್ಯಾಸಗಳು ಕಂಡುಬಂದಿದ್ದು, ಈ ಬಗ್ಗೆ ಪರಿಶೀಲನೆ ಮುಂದುವರಿದಿರುತ್ತದೆ.

ಈ ನಡುವೆ, ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ, ದೂರುದಾರರಾದ ಮೊಹಮ್ಮದ್ ಮುಕ್ಬುಲ್ (34) ರವರು ಸಂಬಂಧಿಯೊರ್ವರ ಸ್ಕೂಟರ್ ನಲ್ಲಿ ಸಹಚಾಲಕರಾಗಿ ಕುಳಿತು ಬೊಳ್ಯಾರ್ ಕಡೆಯಿಂದ ಮೆಲ್ಕಾರ್ ಕಡೆಗೆ ಸ್ಕೂಟರ್ ತೆರಳುತ್ತಿದ್ದರು. ಅವರು ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಅಲ್ಲಿ ಬೊಳ್ಯಾರ್ ಕಡೆಗೆ ಮುಖಮಾಡಿ ನಿಲ್ಲಿಸಿದ್ದ ಸ್ಕೂಟರ್ ನಲ್ಲಿ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಕುಳಿತಿದ್ದು, ಅವರ ಪೈಕಿ ಓರ್ವ ವ್ಯಕ್ತಿ ದೂರುದಾರರು ತೆರಳುತ್ತಿದ್ದ ಸ್ಕೂಟರ್ ಕಡೆಗೆ ಓಡಿ ಬಂದಿರುತ್ತಾನೆ.
ಆ ವೇಳೆ ಆತನ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧವನ್ನು ದೂರುದಾರರು ನೋಡಿರುವುದಿಲ್ಲ. ಆ ವ್ಯಕ್ತಿ ಓಡಿ ಬರುತ್ತಿರುವುದನ್ನು ಗಮನಿಸಿದ ದೂರುದಾರರು ಸ್ಕೂಟರ್ ಚಾಲನೆ ಮಾಡುತ್ತಿದ್ದ ತನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗುವಂತೆ ತಿಳಿಸಿದ್ದಾರೆ. ಆ ಬಳಿಕ ಹಿಂತಿರುಗಿ ನೋಡದೇ ನಂದಾವರದ ಮನೆಗೆ ತೆರಳಿ ತನ್ನ ತಂದೆಗೆ ಘಟನೆಯ ಬಗ್ಗೆ ತಿಳಿಸಿರುತ್ತಾರೆ. ವಾಟ್ಸಾಪ್ ಗಳಲ್ಲಿ ಪ್ರಸಾರವಾಗುತ್ತಿರುವ ತಲವಾರು ಧಾಳಿ ಎಂಬ ಸುಳ್ಳುಸುದ್ದಿಗಳಿಗೂ ತನಗೂ ಯಾವುದೇ ಸಂಬಂಧ ಇರುವುದಿಲ್ಲ ಹಾಗೂ ತಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸಿರುವುದಿಲ್ಲ ಎಂಬುದಾಗಿ ದೂರುದಾರು ವಿಚಾರಣೆಯ ವೇಳೆ ತಿಳಿಸಿರುತ್ತಾರೆ.
ದೂರುದಾರರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 73/2025, u/s 125 BNSರಂತೆ ಪ್ರಕರಣ ದಾಖಲಿಸಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಘಟನಾ ಸ್ಥಳಕ್ಕೆ ಪಿ.ಎಸ್.ಐ ರವರು ಧಾವಿಸಿದಾಗ, ಅಲ್ಲಿ ನೆರೆದಿದ್ದ ಕೆಲವರು ಕಳೆದ ವಾರ ಬಕ್ರೀದ್ ಸಮಯದಲ್ಲಿ ಸಜಿಪನಡುವಿನಲ್ಲಿ ಸಾಗಿಸುತ್ತಿದ್ದ ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಆದರೆ ಕಳೆದ ವಾರದಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂಬುದಾಗಿ ಕೇಳಿರುತ್ತಾರೆ. ಕಳೆದ ವಾರದಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹಾಗೂ ಬಕ್ರೀದ್ ಸಮಯದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೂ ಯಾವ ರೀತಿ ಸಂಬಂಧ ಇರುತ್ತದೆ ಎಂಬ ಆಯಾಮದಲ್ಲೂ ಪರಿಶೀಲಿಸಲಾಗುತ್ತಿದೆ.