ಬಂಟ್ವಾಳ, ಜೂ. 21 (DaijiworldNews/AA): ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ 'ತುಳುವೆರೆನ ತುಳುನಾಡ ಸಂತೆ' ಕುಕ್ಕು, ಪೆಲಕಾಯಿದ ಒಟ್ಟು ತುಳು ಸಾಹಿತ್ಯ, ಸಾಂಸ್ಕೃತಿಕ ರಂಗ್ ಮಳೆಗಾಲದ ಮೂರು ದಿನಗಳ ವಿಶೇಷ ಕಾರ್ಯಕ್ರಮಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.


ಹಲಸನ್ನು ಕತ್ತರಿಸುವ ಮೂಲಕ 'ತುಳುವರೆನ ತುಳುನಾಡ ಸಂತೆ'ಯನ್ನು ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಿ ಮಾತನಾಡಿ, "ಈ ಹಿಂದೆ ಪಂಚಾಯತ್ ಮಟ್ಟದಲ್ಲಿದ್ದ ನಡೆಯುತ್ತಿದ್ದ ಸಂತೆ ಮಾರುಕಟ್ಟೆ ಪ್ರಸಕ್ತ ದಿನಗಳಲ್ಲಿ ಕಾಣಸಿಗುತ್ತಿಲ್ಲ. ಮಧ್ಯವರ್ತಿಗಳಿಲ್ಲದೆ ಕೃಷಿಕರ ಉತ್ಪನ್ನಗಳಿಗೆ ಸಂತೆಯು ನೇರ ಮಾರುಕಟ್ಟೆಯಾಗಿದ್ದು, ಪ್ರಸ್ತುತ ಕಾಲದಲ್ಲಿ ತುಳುನಾಡ ಸಂತೆ ಮಾರುಕಟ್ಟೆಯ ಅನಿವಾರ್ಯತೆ ಇದೆ" ಎಂದರು.
ತುಳುರಾಜ್ಯ ಅಪೇಕ್ಷೆ ತಪ್ಪಲ್ಲ: ಮಾಜಿ ಸಚಿವ ಬಿ.ರಮಾನಾಥ ರೈ
ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಿವಿಧ ಕಾರ್ಯಕ್ರಮಗಳನ್ನು ದೀಪಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, "ತುಳುವೆ ಹಲಸಿನಂತೆ ತುಳುವರ ಮನಸ್ಸು ಮೃಧು ಮತ್ತು ಪರಿಶುದ್ಧವಾಗಿದೆ. ತುಳು ಎಲ್ಲಾ ಭಾಷೆ, ವರ್ಗದ ಜನರನ್ನು ಪ್ರೀತಿಸುವ ಭಾಷೆಯಾಗಿದೆ. ತುಳು ಭಾಷೆಗೆ ರಾಜ್ಯದಲ್ಲಿ ಮಾನ್ಯತೆ ಸಿಗಬೇಕೆಂಬ ಕೂಗು ತುಳುವರದ್ದಾಗಿದ್ದು, ಈ ನಿಟ್ಟಿನಲ್ಲಿ ಚರ್ಚೆ, ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದರೂ, ಇನ್ನು ಫಲ ಸಿಗದ ನೋವು ನಮಗೆಲ್ಲರಿಗೂ ಇದೆ" ಎಂದು ಹೆಳಿದರು.
ಮುಂದುವರೆದು, "ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾದರೆ ಸಾಲದು, ಪ್ರಸಕ್ತ ಕಾಲಘಟ್ಟದಲ್ಲಿ ಕಾಸರಗೋಡು, ದ.ಕ., ಉಡುಪಿ ಸಹಿತ ಅಕ್ಕಪಕ್ಕದ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ತುಳುರಾಜ್ಯದ ಬೇಡಿಕೆಯನ್ನು ಅಪೇಕ್ಷಿಸುವುದು ತಪ್ಪಲ್ಲ. ಮುಂದಿನ ದಿನಗಳಲ್ಲೂ ತುಳುವಿಗೆ ಸ್ಥಾನಮಾನ ಸಿಗುವಂತಾಗಲು ಸಾಂಘಿಕವಾದ ಪ್ರಯತ್ನವಾಗಬೇಕಾಗಿದೆ" ಎಂದು ತಿಳಿಸಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ, "ದೇಶದಲ್ಲಿ ಸುಮಾರು ಒಂದೂವರೆ ಕೋಟಿ ಜನರು ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ. ಪಂಚ ದ್ರಾವಿಡ ಭಾಷೆಯಲ್ಲೊಂದಾದ ತುಳುವಿಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು" ಎಂದು ನುಡಿದರು.
ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಳು ಲಿಪಿ ಶಿಕ್ಷಕಿ, ಸಂಘಟಕಿ ಗೀತಾಲಕ್ಷ್ಮೀಶ್, ಬಿ.ಸಿ.ರೋಡಿನ ನ್ಯಾಯವಾದಿ ಮತ್ತು ನೋಟರಿ ಅಶ್ವನಿಕುಮಾರ್ ರೈ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಮೂಡೂರು-ಪಡೂರು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಬಿ.ಸಿ.ರೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಕು. ತೃಪ್ತಿ, ರಮ್ಯಾಶ್ರೀ, ಯಶಸ್ವಿನಿ, ಲತೇಶ್ ಬಿ. ಅವರನ್ನು ಹಾಗೂ ತುಳು ಭಾಷಾ ಶಿಕ್ಷಕರಾದ ರಮೇಶ್ ಗೇರುಕಟ್ಟೆ ಅವರನ್ನು ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ಅಹಮಾದಬಾದ್ ವಿಮಾನದುರಂತದಲ್ಲಿ ಮಡಿದವರಿಗೆ ಶೃದ್ಧಾಂಜಲಿ ಸಮರ್ಪಿಸಲಾಯಿತು.
ತುಳುಕೂಟದ ಕೋಶಾಧಿಕಾರಿ ಸುಭಾಶ್ ಚಂದ್ರ ಜೈನ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಸೇಸಪ್ಪ ಮಾಸ್ಟರ್ ತುಂಬೆ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸುಕುಮಾರ್ ಬಂಟ್ವಾಳ ವಂದಿಸಿದರು.
ಮಧ್ಯಾಹ್ನದ ಬಳಿಕ 'ಸಾಂಸ್ಕೃತಿಕ ರಂಗ್' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತುಳು ಪದರಂಗಿತೊ, ಸಂಜೆ 'ಬಲೆ ತೆಲಿಪಾಲೆ ಮತ್ತು ಬಲೆ ಬುಲಿಪಾಲೆ' ಕಾರ್ಯಕ್ರಮ ನಡೆಯಿತು.
ಹಲಸು, ಮಾವಿನ ವಿವಿಧ ಉತ್ಪನ್ನಗಳ ಸಹಿತ ಇತರೆ ವಸ್ತುಗಳ ಮಾರಾಟ ಮತ್ತು ಪ್ರದರ್ಶನದ ಕೇಂದ್ರಗಳು ಗಮನ ಸೆಳೆಯಿತು.