ಮಂಗಳೂರು, ಜೂ. 22 (DaijiworldNews/TA): ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆ ಕಚೇರಿಗೆ ದಾಳಿ ನಡೆಸಿದ್ದಾರೆ. ಆಯಾ ವಿಭಾಗದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದು, ಕೆಲವು ಕಡತಗಳು ನಿಗದಿತ ಸಮಯದಿಂದ ವಿಲೇವಾರಿ ಆಗದೆ ಬಾಕಿ ಇರುವ ಬಗ್ಗೆಯೂ ಅಧಿಕಾರಿ – ಸಿಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಸಾರ್ವಜನಿಕರ ಆರೋಪಕ್ಕೆ ಸಂಬಂಧಪಟ್ಟ ಕೆಲವು ಮಹತ್ವದ ದಾಖಲೆ ಪತ್ರಗಳು ಲಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಪಾಲಿಕೆಗೆ ಬಂದಿದ್ದ ವ್ಯಕ್ತಿಯೊಬ್ಬರ ಬಳಿ 5 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಹಣದ ಮೂಲ ಇತ್ಯಾದಿ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಮಕ್ಕಳ ಫೀಸ್ ಕಟ್ಟಲು ತಂದಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ವಿವಿಧ ಕೆಲಸಗಳನ್ನು ಮಾಡಿಸಲು ಪಾಲಿಕೆಗೆ ಬಂದಿದ್ದ ಹಲವು ಮಂದಿ ಮಧ್ಯವರ್ತಿಗಳನ್ನೂ ವಿಚಾರಣೆ ನಡೆಸಲಾಗಿದೆ. ಸಿಬಂದಿಗಳ ಪರ್ಸ್, ಗೂಗಲ್ ಪೇ ಮೊದಲಾದ ಹಣ ವರ್ಗಾವಣೆಯ ಆ್ಯಪ್ಗಳನ್ನೂ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಂದಲೂ ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆದರು.