ಕಾಸರಗೋಡು, ಜೂ 22 (Daijiworld News/MSP): ಏಕಾಂಗಿಯಾಗಿ ವಾಸವಾಗಿದ್ದ ವೃದ್ಧ ಮಹಿಳೆಯ ಮೃತದೇಹ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆ ಬೀಚ್ ರಸ್ತೆಯಲ್ಲಿ ನಡೆದಿದೆ.
ನೆಲ್ಲಿಕುಂಜೆ ಬೀಚ್ ರಸ್ತೆಯ ದಿವಂಗತ ಎಂ. ಎಸ್ ಬಳ್ಳುಳ್ಳಾಯರವರ ಪತ್ನಿ ಸರೋಜಿನಿ ಬಾಯಿ(75 ) ಮೃತಪಟ್ಟವರು. ಮನೆಯಿಂದ ದುರ್ವಾಸನೆ ಬರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹ ಕೊಳತು ಹೋಗಿದ್ದು ಐದು ದಿನ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪತಿ ಬಳ್ಳುಳ್ಳಾಯ ಮೃತಪಟ್ಟ ಬಳಿಕ ಸರೋಜಿನಿ ಏಕಾಂಗಿಯಾಗಿ ವಾಸವಾಗಿದ್ದರು. ದಂಪತಿಗೆ ಮಕ್ಕಳಿಲ್ಲ. ಸ್ಥಳೀಯ ನಿವಾಸಿಗಳು ಕೆಲ ದಿನಗಳಿಂದ ಈ ಮನೆಗೆ ತೆರಳದಿರುವುದರಿಂದ ಸರೋಜಿನಿ ಬಾಯಿ ಮೃತಪಟ್ಟ ವಿಚಾರ ಯಾರ ಗಮನಕ್ಕೂ ಬಂದಿರಲಿಲ್ಲ. ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.