ಬಂಟ್ವಾಳ, ಜೂ. 27(DaijiworldNews/TA) : ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್ ಐ ಟಿ ಕೆ ಸಂಸ್ಥೆಯಿಂದ ಪ್ರೊಫೆಸರ್ ಡಾ. ಪಲಿನಿ ಸ್ವಾಮಿ, ವಿಜಯನ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.










ಮಳೆಗಾಲವಾಗಿದ್ದರಿಂದ ಸೇತುವೆಯ ಪಿಲ್ಲರ್ ಹಾಗೂ ಹೆಚ್ಚಿನ ಪರಿಶೀಲನೆ ಅಸಾಧ್ಯ ಎಂದು ಹೇಳಿರುವ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯ ಸಿದ್ದೀಕ್ ಅವರು ತಿಳಿಸಿದ್ದಾರೆ. ಸೇತುವೆ ಪ್ರವೇಶದ ಆರಂಭಿಕ ಜಾಗದಲ್ಲಿ ಇಲಾಖೆಯ ವತಿಯಿಂದ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಆದೇಶ ಮಾಡಿದ್ದರು.
ಸಾಮರ್ಥ್ಯ ಪರೀಕ್ಷೆ ನಡೆಸಿ ವರದಿ ನೀಡಿದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಎಂದು ಅವರ ಅದೇಶದಲ್ಲಿ ಉಲ್ಲೇಖಿಸಲಾಗಿತ್ತು. ಅದರೆ ಈ ಭಾಗದ ಜನರ ಒತ್ತಾಯದ ಮೇರೆಗೆ ಸ್ಥಳೀಯ ಪುರಸಭಾ ಸದಸ್ಯರ ಮನವಿಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಯಥಾಸ್ಥಿತಿಯಲ್ಲಿ ಇರುವಂತೆ ಕೋರಲಾಗಿತ್ತು.ಇದೀಗ ವಾಹನಗಳು ನಿರ್ಬಂಧವಿಲ್ಲದೆ ಓಡಾಟ ನಡೆಸುತ್ತಿವೆ. ಈ ನಡುವೆ ಸ್ಥಳೀಯ ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬೇಟಿ ಮಾಡಿ ಸಂಚಾರ ನಿರ್ಬಂಧ ಮಾಡದಂತೆ ಮನವಿಯನ್ನು ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎನ್.ಐ.ಟಿ.ಕೆ.ಅಧಿಕಾರಿಗಳು ಭೇಟಿ ನೀಡಿದ್ದಾರೆ.