ಸುರತ್ಕಲ್, ಜೂ. 27(DaijiworldNews/TA) : ಹೊಸಬೆಟ್ಟು ಫಿಶರೀಶ್ ರಸ್ತೆಯ ಶ್ರೀ ವೀರ ಹನುಮಾನ್ ಮಂದಿರದ ಬಳಿ ಗೇಲ್ ಗ್ಯಾಸ್ ಮುಖ್ಯ ಜಂಕ್ಷನ್ ನಲ್ಲಿ ಗ್ಯಾಸ್ ಲೀಕಾಗಿ ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ನಡೆದಿದೆ.

ಹನುಮಾನ್ ಮಂದಿರದಲ್ಲಿ ದೀಪ ಇಡಲು ಬಂದಿದ್ದ ಸಂದರ್ಭ ಅಲ್ಲಿನ ಸಮಿತಿ ಸದಸ್ಯರಿಗೆ ಗ್ಯಾಸ್ ವಾಸನೆ ಬಂದಿತ್ತು. ಹೀಗಾಗಿ ಸಮೀಪದ ಮನೆಗಳು ಮತ್ತು ರೆಸಾರ್ಟ್ ಗಳಲ್ಲಿ ವಿಚಾರಿಸಿದಾಗ ಎಲ್ಲೂ ಗ್ಯಾಸ್ ಲೀಕೇಜ್ ಇಲ್ಲದಿರುವುದು ತಿಳಿಯಿತು. ತಕ್ಷಣ ಮಂದಿರದ ಪಕ್ಕದಲ್ಲಿರುವ ಗ್ಯಾಸ್ ಜಂಕ್ಷನ್ ಬಳಿ ಬಂದು ಪರಿಶೀಲಿಸಿದಾಗ ಅಲ್ಲಿ ಜಂಕ್ಷನ್ ಹೊಡೆದು ಗ್ಯಾಸ್ ಲೀಕ್ ಆಗುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಇದರಿಂದ ಆತಂಕಕ್ಕೀಡಾದ ಗ್ರಾಮಸ್ಥರು ಗೇಲ್ ಇಂಡಿಯಾ ಕಂಪನಿಗೆ ಮಾಹಿತಿ ನೀಡಿದರು. ಗೇಲ್ ಇಂಡಿಯಾ ಕಂಪೆನಿಯ ಕಾರ್ಮಿಕರು ಗ್ಯಾಸ್ ಲೀಕೇಜ್ ತಡೆ ಕಾಮಗಾರಿ ಆರಂಭಿಸಿದ್ದಾರೆ. ಆದರೆ ಗ್ಯಾಸ್ ನ ಜಂಕ್ಷನ್ ಭಾಗವು ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ಫಿಶರೀಸ್ ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿದ್ದು, ಅದನ್ನು 10 ಅಡಿಗಳಷ್ಟು ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಹಾಗಾಗಿ ಮಳೆಗಾಲ ವಾಗಿರುವುದರಿಂದ ರಸ್ತೆ ಕುಸಿಯುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಸದ್ಯ ಕಾಮಗಾರಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಮತ್ತು ಸ್ಥಳೀಯ ಕಾರ್ಪೊರೇಟರ್ ಸರಿತಾ ಶಶಿಧರ್ ಅವರು ಭೇಟಿ ನೀಡಿ ಗೇಲ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಯ ಅಡಿಭಾಗವನ್ನು ಕೊರೆದು ಕಾಮಗಾರಿ ಮುಗಿಸಿದ ಬಳಿಕ ರಸ್ತೆಯ ಅಡಿಭಾಗಕ್ಕೆ ಜಲ್ಲಿ ಇನ್ನಿತರ ಘನ ವಸ್ತುಗಳನ್ನ ತುಂಬಿಸಿ ರಸ್ತೆಯ ಅಡಿಭಾಗವನ್ನು ಭದ್ರ ಪಡಿಸಬೇಕೆಂದು ಅವರು ಗುತ್ತಿಗೆದಾರರು ಮತ್ತು ಗೇರ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.