ಕಾಸರಗೋಡು, ಜೂ. 27(DaijiworldNews/AK) : ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋ (59) ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ಪುತ್ರ ಮೆಲ್ವಿನ್ ವಿಚಾರಣೆ ವೇಳೆ ನೀಡಿರುವ ಬೆಚ್ಚಿ ಬೀಳಿಸುವ ಹೇಳಿಕೆಗಳನ್ನು ನೀಡಿದ್ದಾನೆ.


ಆಸ್ತಿ ಹಾಗೂ ಹಣಕ್ಕಾಗಿ ಈತ ಕೃತ್ಯ ನಡೆಸಿದ್ದಾನೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಕೆಲ ದಿನಗಳಿಂದ ಈತ ತಾಯಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲ ಒತ್ತಡ ಹೇರುತ್ತಿದ್ದನು . ನಿರಂತರ ವಾಗಿ ಪಾನಮತ್ತನಾಗಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ತನಗೆ ವಿವಾಹ ಮಾಡಿಕೊಡಬೇಕು ಇದಕ್ಕಾಗಿ ಹಣ ನೀಡುವಂತೆ ಮೆಲ್ವಿನ್ ತಾಯಿಯಲ್ಲಿ ಒತ್ತಡ ಹಾಕುತ್ತಿದ್ದನು. . ಇದಲ್ಲದೆ ಆಸ್ತಿಯನ್ನು ವಿವಾಹ ಬಳಿಕ ತನ್ನ ಹೆಸರಿಗೆ ಬರೆದು ಕೊಡುವಂತೆ ಒತ್ತಡ ಹೇರಿದ್ದು , ಇದಕ್ಕೆ ತಾಯಿ ಹಿಲ್ಡಾ ಡಿ ಸೋಜ ನಿರಾಕರಿಸಿದ್ದರು. ಈ ದ್ವೇಷದಿಂದ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ .
ಗುರುವಾರ ಮುಂಜಾನೆ ಮೆಲ್ವಿನ್ ಸೌದೆ ಯಿಂದ ಹಿಲ್ಡಾರ ತಲೆಗೆ ಹೊಡೆದಿದ್ದಾನೆ. ನೆಲಕ್ಕೆ ಬಿದ್ದ ಹಿಲ್ಡಾರ ಕತ್ತು ಹಿಸುಕಿ ಕೊಲೆಗೈದ ಬಳಿಕ ಮನೆಯಿಂದ ಎಳೆದೊಯ್ದು ಪ್ಲಾಸ್ಟಿಕ್ , ವಸ್ತ್ರ , ತರಗೆಲೆ ಯನ್ನು ರಾಶಿ ಹಾಕಿ ಮೃತದೇಹವನ್ನು ಸುಡಲು ಬೆಂಕಿ ಹಚ್ಚಿದ್ದನು.
ಬಳಿಕ ಸಮೀಪದ ಲೋಲಿಟಾ ರವರನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಆದರೆ ತಪ್ಪಿಸಿ ಓಡಿದ್ದರರಿಂದ ಲೋಲಿಟಾ ಅಪಾಯದಿಂದ ಪಾರಾಗಿದ್ದಾರೆ. ಶೇಕಡಾ ೪೦ ರಷ್ಟು ಸುಟ್ಟ ಗಾಯಗೊಂಡಿರುವ ಲೋಲಿಟಾ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ತನಗೆ ತಾಯಿ ಹಣ ನೀಡಲು ಲೋಲಿಟಾ ಅಡ್ಡಿ ಪಡಿಸುತ್ತಿದ್ದಾರೆಂಬ ಸಂಶಯದಿಂದ ಮೆಲ್ವಿನ್ ಲೋಲಿಟಾರ ಕೊಲೆಗೂ ಯತ್ನಿಸಿದ್ದಾನೆ ಎಂದು ಈತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ,
ಕೃತ್ಯದ ಬಳಿಕ ಪರಾರಿಯಾಗಿದ್ದ ಮೆಲ್ವಿನ್ ಈ ಹಿಂದೆ ಕೆಲಸ ಮಾಡುತ್ತಿದ್ದ ಬೈಂದೂರು ಸಮೀಪದ ಕ್ವಾರಿಗೆ ತಲುಪಿ ತಲೆಮರೆಸಿಕೊಂಡಿದ್ದನು. ಮೊಬೈಲ್ ಫೋನ್ ಲೊಕೇಶನ್ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ಕೂಲಿ ಕೆಲಸ ನಿರ್ವಹಿಸುತ್ತಿದ್ದ ಮೆಲ್ವಿನ್ ಕೆಲ ವಾರಗಳಿಂದ ಕೆಲಸಕ್ಕೆ ತೆರಳುತ್ತಿರಲಿಲ್ಲ . ಪಾನಮತ್ತನಾಗಿ ಮನೆಗೆ ಬಂದು ತಾಯಿಗೆ ಕಿರುಕುಳ ನೀಡುತ್ತಿದ್ದನು. ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಶುಕ್ರವಾರ ವರ್ಕಾಡಿ ಸೇಕ್ರೆಟ್ ಹಾರ್ಟ್ ಆಫ್ ಜೀಸಸ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನೆರವೇರಿತು.
ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ.