ಉಡುಪಿ, ಜೂ. 27 (DaijiworldNews/AA): ಭಾರತದ ಸಮುದ್ರ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಓಮನ್ ನೌಕೆಯಲ್ಲಿದ್ದ ಮೂವರು ತಮಿಳುನಾಡು ಮೂಲದ ಮೀನುಗಾರರು ತಪ್ಪಿತಸ್ಥರೆಂದು ಸಾಬೀತಾಗಿದ್ದು, ದಂಡ ವಿಧಿಸಲಾಗಿದೆ.


2025ರ ಫೆಬ್ರವರಿ 24ರಂದು ಮಂಗಳೂರು ಕರಾವಳಿ ಕಾವಲು ಪಡೆಯ ಮುಖ್ಯ ಅಧಿಕಾರಿ ಸುಖ್ವಿಂದರ್ ಸಿಂಗ್ ಮತ್ತು ಅವರ ತಂಡವು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ, ಓಮನ್ನಿಂದ ಬಂದ ದೋಣಿಯೊಂದನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ಅದರಲ್ಲಿ ಭಾರತದ ಗಡಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿತು. ಇದರ ನಂತರ, ಔಪಚಾರಿಕ ದೂರು ದಾಖಲಿಸಲಾಯಿತು ಮತ್ತು ಮಲ್ಪೆ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಕೇಶ್ ಎ.ಸಿ. ಪ್ರಕರಣವನ್ನು ದಾಖಲಿಸಿಕೊಂಡರು.
ಆರೋಪಿಗಳಾದ, ಭಾರತೀಯ ಪ್ರಜೆಗಳಾದ ಜೇಮ್ಸ್ ಫ್ರಾಂಕ್ಲಿನ್, ರಾಬಿನ್ಸ್ಟನ್ ಮತ್ತು ಟಿರೋಸ್ ಯಾನೆ ಡಿರೋಜ್, ಮೀನುಗಾರಿಕೆಗೆ ಸಂಬಂಧಿಸಿದ ಉದ್ಯೋಗಕ್ಕಾಗಿ ಓಮನ್ಗೆ ಪ್ರಯಾಣಿಸಿದ್ದರು ಎನ್ನಲಾಗಿದೆ. ಆದರೆ, ಆದಾಯದ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಅವರು ಅಲ್ಲಿ ಸಿಲುಕಿಕೊಂಡಿದ್ದರು. ತನಿಖೆಯ ಪ್ರಕಾರ, ಅವರ ಮೂಲ ಪಾಸ್ಪೋರ್ಟ್ಗಳನ್ನು ಓಮಾನ್ ದೋಣಿಯ ಮಾಲೀಕ ಅಬ್ದುಲ್ಲಾ ತಡೆಹಿಡಿದಿದ್ದರು. ಪದೇ ಪದೇ ವಿನಂತಿಸಿದರೂ ಅವರು ಪಾಸ್ಪೋರ್ಟ್ಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ, ಇದರಿಂದಾಗಿ ಮೂವರಿಗೂ ಭಾರತಕ್ಕೆ ಮರಳಲು ಯಾವುದೇ ಕಾನೂನುಬದ್ಧ ಮಾರ್ಗವಿರಲಿಲ್ಲ.
ಬೇರೆ ದಾರಿಯಿಲ್ಲದೆ, ಆರೋಪಿಗಳು ಮಾನ್ಯ ಪಾಸ್ಪೋರ್ಟ್ಗಳು ಇಲ್ಲದೆ ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದರು. ಮಲ್ಪೆ ಕರಾವಳಿ ಭದ್ರತಾ ಪೊಲೀಸರು, ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮತ್ತು ಪಿಎಸ್ಐ ಶಿವಶಂಕರ್ ನೇತೃತ್ವದಲ್ಲಿ ಸಂಪೂರ್ಣ ತನಿಖೆ ನಡೆಸಿದರು. 33 ಸಾಕ್ಷಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಮೂವರು ದಿ ಫಾರಿನರ್ಸ್ ಆರ್ಡರ್, 1950 ರ ಸೆಕ್ಷನ್ 6 (ಎ) ಮತ್ತು ದಿ ಫಾರಿನರ್ಸ್ ಆಕ್ಟ್, 1981 ರ ಸೆಕ್ಷನ್ 14 ಅನ್ನು ಉಲ್ಲಂಘಿಸಿದ್ದಾರೆ ಎಂದು ದೃಢಪಟ್ಟಿದೆ.
ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಂತರ, ಮೂವರೂ ಭಾರತದ ಪ್ರಾದೇಶಿಕ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿತು. ಈ ಹಿನ್ನೆಲೆ ನ್ಯಾಯಾಲಯವು ಮೊದಲನೇ ಹಾಗೂ ಎರಡನೇ ಆರೋಪಿಗೆ ತಲಾ 10,000 ರೂ. ಮತ್ತು ಮೂರನೇ ಆರೋಪಿಗೆ 60,000 ರೂ. ದಂಡ ವಿಧಿಸಿತು. ಈ ಮೂಲಕ ಒಟ್ಟು 80,000 ರೂ. ದಂಡ ವಿಧಿಸಲಾಗಿದೆ.