ಮಂಗಳೂರು, ಜೂ. 29 (DaijiworldNews/AA): ಒಎಲ್ಎಕ್ಸ್ ಆ್ಯಪ್ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ 2,50,000 ರೂ. ಹಣ ಪಡೆದು ವಂಚನೆ ಮಾಡಿದ ಬಗ್ಗೆ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಸರ್ಕಾರಿ ಆಸ್ಪತ್ರೆ ಹತ್ತಿರದ ಸೊರಬಾ ರಸ್ತೆ ನಿವಾಸಿ ರವಿಚಂದ್ರ ಮಂಜುನಾಥ ರೇವಣಕರ(29) ಬಂಧಿತ ಆರೋಪಿ.
ದೂರುದಾರರಿಂದ ಆರೋಪಿ ರವಿಚಂದ್ರ ಮಂಜುನಾಥ ಒಎಲ್ಎಕ್ಸ್ ಆ್ಯಪ್ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ 2,50,000 ರೂ. ಹಣ ಪಡೆದು ವಂಚನೆ ಮಾಡಿದ್ದಾನೆ.
ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಠಾಣಾ ಅಪರಾಧ ಕ್ರಮಾಂಕ 28/2025 ಕಲಂ 66(ಸಿ) 66(ಡಿ) ಐಟಿ ಕಾಯ್ದೆ, 318(4), 3(5), 112 ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಜೂನ್ 28ರಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರು ಒಎಲ್ಎಕ್ಸ್ ಆ್ಯಪ್ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಈ ವೇಳೆ ಆರೋಪಿಯು ಹೊಸಪೇಟೆಯಲ್ಲಿರುವುದಾಗಿ ತಿಳಿದುಬಂದಿದೆ. ಕೂಡಲೇ ಬೇರೆ ಪ್ರಕರಣದಲ್ಲಿ ಹೊಸಪೇಟೆ ಹತ್ತಿರ ಆರೋಪಿ ಪತ್ತೆ ಕರ್ತವ್ಯದ್ದಲ್ಲಿದ್ದ ಸೆನ್ ಪೊಲೀಸ್ ಠಾಣಾ ತನಿಖಾ ತಂಡವನ್ನು ಹೊಸಪೇಟೆಗೆ ಕಳುಹಿಸಿ ಆರೋಪಿತ ರವಿಚಂದ್ರ ಮಂಜುನಾಥ ರೇವಣಕರನನ್ನು ವಶಕ್ಕೆ ಪಡೆದು ಸೆನ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು.
ತನಿಖೆಯ ವೇಳೆ ಆರೋಪಿತನು ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 21 ಬ್ಯಾಂಕ್ ಖಾತೆಗಳುನ್ನು ಹೊಂದಿದ್ದು, ಹಾಗೂ 8 ಸಿಮ್ ಕಾರ್ಡ್ಗಳು ಬಳಕೆ ಮಾಡಿದ್ದು, ಕಂಡುಬಂದಿರುತ್ತದೆ. ಈ 8 ಮೊಬೈಲ್ ನಂಬರ್ಗಳ ಮೇಲೆ 80 ಕ್ಕೂ ಹೆಚ್ಚಿನ ಸೈಬರ್ ವಂಚನೆ ದೂರುಗಳು ದಾಖಲಾಗಿರುವುದು ತಿಳಿದುಬಂದಿರುತ್ತದೆ.
ತನಿಖೆಯ ವೇಳೆ ಆರೋಪಿಯು ಕಳೆದ 3 ವರ್ಷಗಳಿಂದ ಒಎಲ್ಎಕ್ಸ್ ಆ್ಯಪ್ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಯು ತಾನು ಉಪಯೋಗಿಸುತ್ತಿದ್ದ ಮೊಬೈಲ್ ಅನ್ನು ಕೆಲವು ದಿನಗಳು ಉಪಯೋಗಿಸಿ ಅದನ್ನು ಮಾರಾಟ ಮಾಡುತ್ತಿದ್ದು, ಹೊಸ ಸಿಮ್ ಗಳನ್ನು ಉಪಯೋಗಿಸುತ್ತಿರುವುದು ತಿಳಿದುಬಂದಿದೆ. ಆರೋಪಿಯನ್ನು ಜೂನ್ 29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿರುತ್ತಾರೆ.