ಮಂಗಳೂರು, ಜೂ. 29 (DaijiworldNews/AA): ಇತ್ತೀಚೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಮ್ ಸ್ಯಾನಿ ಅಲ್ವಾರೀಸ್ ಅವರು ಅಕಾಡೆಮಿಯ ಇತರ ಸದಸ್ಯರು ಇತರ ಸಾಹಿತಿಗಳೊಂದಿಗೆ ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ಬರಹಗಾರರ ಭೇಟಿ ಮಾಡಿ ಅವರ ಜೊತೆ ಸಮಾಲೋಚನೆ ನಡೆಸಿ ಗೌರವ ಅರ್ಪಣೆ ಮಾಡಿದರು.






ಕಳೆದ 50 ವರ್ಷಗಳಿಂದ ವಿವಿಧ ಪತ್ರಿಕೆಗಳಿಗೆ ಅದರಲ್ಲಿ ವಿಶೇಷವಾಗಿ ಸಂಪಾದಕರಿಗೆ ಪತ್ರ ಬರೆದು ಪತ್ರಿಕೆಗಳ ಲೇಖನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದ ದೊನಾಥ್ ಡಿ'ಅಲ್ಮೇಡಾ ಅವರನ್ನು ಅವರ ಮನೆಯಲ್ಲಿ ಕುಟುಂಬ ಸಮೇತ ಅಭಿನಂದಿಸಲಾಯಿತು.
ಕಳೆದ ಹಲವಾರು ವರ್ಷಗಳ ಕಾಲ ಆಳವಾದ ಚಿಂತನೆಯ ಬರಹಗಳನ್ನು ಬರೆಯುತ್ತಾ ಈಗಾಗಲೇ ಹತ್ತಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದಿರುವ ಸ್ವಾಮಿ ಆಲ್ಫೋನ್ಸಸ್ ಡಿಲೀಮ ಅವರ ನಿವಾಸದಲ್ಲಿ ಗೌರವಿಸಲಾಯಿತು.
ದೀರ್ಘಕಾಲ ಮಿತ್ರ್, ಝೆಲೊ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದ ಜಾರ್ಜ್ ಮಸ್ಕರೇನ್ಹಸ್ ಅವರನ್ನು ಅವರ ನಿವಾಸದಲ್ಲಿ ಕುಟುಂಬ ಸಮೇತ ಅಭಿನಂದಿಸಲಾಯಿತು.
ಅಧ್ಯಕ್ಷರ ಜೊತೆ ಅಕಾಡೆಮಿಯ ಸದಸ್ಯರಾದ ನವೀನ್ ಲೋಬೊ, ದಯಾನಂದ ಮಡ್ಕೇಕರ್, ಕಚೇರಿ ಅಧಿಕಾರಿಗಳಾದ ಮೇರಿ ಡಿಸಿಲ್ವಾ, ಜಯಪ್ರದ, ಸಾಹಿತಿ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಮುಂತಾದವರು ಉಪಸ್ಥಿತರಿದ್ದರು.