ಪುತ್ತೂರು, ಜೂ. 30 (DaijiworldNews/TA): ಕುದ್ಮಾರ್ ಗ್ರಾಮದ ಕೂರತ್ ಮಸೀದಿಯಲ್ಲಿ ಕೂರತ್ ತಂಙಳ್ರ ಹೆಸರಿನಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮದ ಅಂತಿಮ ದಿನವಾದ ರವಿವಾರ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಜನದಟ್ಟಣೆ ಉಂಟಾಗಿ ಆರು ಮಂದಿ ಅಸ್ವಸ್ಥಗೊಂಡ ಘಟನೆ ನಡಿದೆದೆ.

ಉರೂಸ್ ಕಾರ್ಯಕ್ರಮಕ್ಕೆ ವಿವಿಧ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾರೀ ಜನದಟ್ಟಣೆಯ ಕಾರಣ ಆರು ಮಂದಿ ದೈಹಿಕವಾಗಿ ನಿತ್ರಾಣಗೊಂಡಿದ್ದರು. ಅವರನ್ನು ತಕ್ಷಣ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಚರಿಸಿದ್ದು, ಇಬ್ಬರ ಆರೋಗ್ಯ ಸ್ಥಳದಲ್ಲೇ ಸುಧಾರಿಸಿದೆ. ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಅವರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳನ್ನು ಹರಡಬಾರದು ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಎಸ್ಪಿ ವಿನಂತಿ ಮಾಡಿದ್ದಾರೆ. ರವಿವಾರ ಮುಂಜಾನೆಯಿಂದಲೂ ಭಾರೀ ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ಆಗಮಿಸಿದ್ದರಿಂದ ಉರೂಸ್ ನಡೆಯುವ ಪ್ರದೇಶದ ಎಲ್ಲಾ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿತ್ತು.