ಮಂಗಳೂರು, ಜೂ. 30 (DaijiworldNews/TA): ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮೂರು ದಿನಗಳ ಕಾಲ ಶಾಸಕರು, ಪಕ್ಷದ ಮುಖಂಡರನ್ನು ಭೇಟಿ ಮಾಡಿ, ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಆದರೆ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಆಡಳಿತ ಪಕ್ಷದ ಶಾಸಕರು, ಸಚಿವರೇ ಅಧಿಕಾರ ಹಂಚಿಕೆ, ಪವರ್ ಸೆಂಟರ್, ಸೆಪ್ಟಂಬರ್ ಕ್ರಾಂತಿ, ಸಿಎಂ ಬದಲಾವಣೆ ವಿಚಾರ ಚರ್ಚೆ ಮಾಡುವ ನಿಟ್ಟಿನಲ್ಲಿ ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. ಒಂದು ವೇಳೆ ನಮ್ಮಲ್ಲಿ ಯಾವುದೇ ಸಮಸ್ಯೆ ಇದ್ದರೆ ಇತ್ಯರ್ಥ ಮಾಡಲಾಗುವುದು.
ಒಂದೆರಡು ದಿನದಲ್ಲಿ ನಾನು ಸುರ್ಜೆವಾಲಾ ಅವರನ್ನು ಭೇಟಿ ಮಾಡಲಿದ್ದು, ಆಂತರಿಕ ವಿಷಯಗಳನ್ನು ನಾವು ಬಗೆಹರಿಸಲಿದ್ದೇವೆ. ಸರ್ಕಾರ ಭದ್ರವಾಗಿದ್ದು, ಸುಭದ್ರವಾಗಿದೆ. ರಾಜ್ಯದಲ್ಲಿ ಯಾವ ಕ್ರಾಂತಿನೂ ಆಗುವುದಿಲ್ಲ. ಮೂರು ತಿಂಗಳಲ್ಲಿ ಬಿಜೆಪಿ ಆಡಳಿತ ಬರಲಿದೆ ಎಂದು ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಸರಿ ಇದೆ? ಕಾಂಗ್ರೆಸ್ ವಿಚಾರದಲ್ಲಿ ಸಂಭ್ರಮ ಪಟ್ಟುಕೊಳ್ಳುವ ಯಾವುದೇ ವಿಷಯ ಬಿಜೆಪಿಗೆ ಇಲ್ಲ ಎಂದು ತಿಳಿಸಿದರು.