ಮಂಗಳೂರು, ಜೂ. 30 (DaijiworldNews/TA): ನಗರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಹೊಂದುತ್ತಿದ್ದರೂ ಸಮಸ್ಯೆಗಳು ಕೂಡ ಅದೇ ರೀತಿಯಲ್ಲಿ ಉದ್ಬವಿಸುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿದೆ. ರಸ್ತೆ ಬದಿಯಲ್ಲಿ ವಾಹನಗಳನ್ನುಪಾರ್ಕ್ ಮಾಡಲಾಗುತ್ತಿದ್ದು, ಇದರಿಂದ ರಸ್ತೆಯಲ್ಲಿ ತೆರಳುವ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ಅದರಲ್ಲೂ ಕೆಲವೊಂದು ಕಡೆಗಳಲ್ಲಿ ಫುಟ್ ಪಾತ್ ಮೇಲೆಯೇ ಪಾರ್ಕಿಂಗ್ ಮಾಡಲಾಗುತ್ತಿದೆ. ನಗರದ ಫಳ್ನೀರ್ ಭಾಗದಲ್ಲಿ ವಾಹನಗಳನ್ನು ಫುಟ್ ಪಾತ್ ಮೇಲೆಯೇ ನಿಲ್ಲಿಸಲಾಗುತ್ತಿದ್ದು, ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆಯಲ್ಲಿ ನಡೆದುಕೊಂಡು ಹೋದರೆ ಅಪಘಾತ ನಡೆಯುವ ಸಾಧ್ಯತೆ ಕೂಡ ಇದೆ. ಇದು ಕೇವಲ ಫಳ್ನೀರ್ ಭಾಗದ ಸಮಸ್ಯೆಯಲ್ಲ. ಬದಲಾಗಿ ಮಂಗಳೂರಿನ ಹಲವು ಕಡೆಗಳಲ್ಲಿ ರಸ್ತೆಯ ಬದಿಯಲ್ಲೇ ಅಥವಾ ಫುಟ್ ಪಾತ್ ಮೇಲೆಯೇ ಪಾರ್ಕಿಂಗ್ ಮಾಡಲಾಗುತ್ತಿದ್ದು, ಸಮಸ್ಯೆ ಮಿತಿಮೀರುತ್ತಿದೆ.
ಕೆಲದಿನಗಳ ಹಿಂದೆ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು. ಆದರೆ ಫುಟ್ ಪಾತ್ ಮೇಲೆ ನಿಲ್ಲಿಸಲಾಗುವ ಕಾರುಗಳಿಗೆ ಯಾಕೆ ದಂಡ ವಿಧಿಸಲಾಗುತ್ತಿಲ್ಲ ಎನ್ನುವ ಮಾತು ಕೂಡ ನಾಗರಿಕರಿಂದ ಕೇಳಿಬರುತ್ತಿದೆ. ಸದ್ಯ ವ್ಯಕ್ತಿಯೊಬ್ಬರು ಫಳ್ನೀರ್ ನ ಸಮಸ್ಯೆ ಬಗ್ಗೆ ವಿಡಿಯೋ ಮಾಡಿದ್ದು, ಫುಟ್ ಪಾತ್ ಮೇಲೆ ವಾಹನ ನಿಲ್ಲಿಸುವ ಚಾಲಕರ ವಿರುದ್ಧ ಕೂಡಲೇ ಕ್ರಮಕ್ಕೆ ಆಗ್ರಹಿಸಿದ್ದಾರೆ.