ಉಡುಪಿ, ಜೂ. 30 (DaijiworldNews/AA): ತುಂಡರಿಸಿದ ಗೋವಿನ ತಲೆ ಮತ್ತು ಇತರ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಬ್ರಹ್ಮಾವರ ಸಮೀಪದ ಕುಂಜಾಲುವಿನಲ್ಲಿ ತಡರಾತ್ರಿ 11:30ರ ಸುಮಾರಿಗೆ ನಡೆದಿದೆ. ಘಟನೆಯ ನಂತರ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಮಹಜರು ನಡೆಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಪಿ ದೃಢಪಡಿಸಿದ್ದಾರೆ. ಪ್ರಾಣಿಗಳ ಅವಶೇಷ ವಿಲೇವಾರಿಗೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ಗೆ ನಿರ್ದೇಶನ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
"ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಸಮಾಜಘಾತುಕ ಶಕ್ತಿಗಳು ಪ್ರಯತ್ನಿಸುತ್ತಿರುವ ಸಾಧ್ಯತೆ ಇದೆ. ಇದಕ್ಕೂ ಅಕ್ರಮ ಜಾನುವಾರು ಸಾಗಾಟಕ್ಕೂ ಸಂಬಂಧಿಸಿರಬಹುದು. ನಾವು ಎರಡೂ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ" ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
"ಸಮಗ್ರ ತನಿಖೆ ನಡೆಸಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕ ಊಹಾಪೋಹಗಳಲ್ಲಿ ತೊಡಗದಂತೆ ನಾವು ವಿನಂತಿಸುತ್ತೇವೆ. ಪೊಲೀಸರು ಆನ್ಲೈನ್ ವೇದಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ" ಎಂದು ತಿಳಿಸಿದರು.
"ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚುವ ವಿಶ್ವಾಸ ನಮಗಿದೆ. ಕೊಲೆ ತನಿಖೆಯಂತೆಯೇ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ" ಎಂದು ಎಸ್ಪಿ ಒತ್ತಿ ಹೇಳಿದರು.
"ಕಟ್ಟುನಿಟ್ಟಾದ ಗಡುವನ್ನು ನಿಗದಿಪಡಿಸುವುದು ಕಷ್ಟವಾದರೂ, ತನಿಖೆ ವೇಗವಾಗಿ ಪ್ರಗತಿಯಲ್ಲಿದೆ ಮತ್ತು ಸಾಧ್ಯವಿರುವ ಎಲ್ಲ ಸುಳಿವುಗಳನ್ನು ಅನುಸರಿಸಲಾಗುತ್ತಿದೆ" ಎಂದು ವಿವರಿಸಿದರು.