ಉಡುಪಿ, ಜೂ. 30 (DaijiworldNews/AA): ಬ್ರಹ್ಮಾವರ ತಾಲೂಕಿನ ಕುಂಜಾಲಿನಲ್ಲಿ ಗೋವಿನ ತಲೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಮತ್ತೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಬೆಳಕಿಗೆ ಬಂದ ಕೂಡಲೇ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಘಟನೆಯನ್ನು ಬಹು ಆಯಾಮಗಳಿಂದ ತನಿಖೆ ನಡೆಸಲಾಯಿತು. ಸಿಸಿಟಿವಿ ದೃಶ್ಯಾವಳಿ ಮತ್ತು ವಾಹನ ಸಂಚಾರ ವಿಶ್ಲೇಷಣೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬಂಧಿತರನ್ನು ಬ್ರಹ್ಮಾವರ ತಾಲೂಕಿನ ಕುಂಜಾಲುವಿನ ನಿವಾಸಿಗಳಾದ ರಾಮ (49), ಪ್ರಸಾದ್ (21), ಸಂದೇಶ್ (35), ರಾಜೇಶ್ (೨೮), ನವೀನ್ ಮಟಪಾಡಿ (35) ಕೇಶವ ನಾಯ್ಕ್ ಅಡ್ಜಿಲ್ (50) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಕೇಶವ ನಾಯ್ಕ್ ಅವರು ತಮ್ಮಿಂದ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ 1.5 ವರ್ಷದ ಹಸುವನ್ನು ಇತರ ಆರೋಪಿಗಳಿಗೆ ಹಸ್ತಾಂತರಿಸಿದ್ದರು. ನಂತರ ಈ ಗುಂಪು ಆ ಹಸುವನ್ನು ಮಾಂಸಕ್ಕಾಗಿ ಕೊಂದಿದೆ ಎಂದು ಆರೋಪಿಸಲಾಗಿದೆ.
ಗೋವಿನ ದೇಹದ ಭಾಗಗಳನ್ನು ವಾಹನದಲ್ಲಿ ಸಾಗಿಸುವಾಗ ರಸ್ತೆಗೆ ಬಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿ ಅಂತಿಮವಾಗಿ ತನಿಖೆಗೆ ಕಾರಣವಾಯಿತು. ಸಂಗ್ರಹಿಸಿದ ಸುಳಿವುಗಳ ಆಧಾರದ ಮೇಲೆ, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ.
ಗೋವಿನ ದೇಹದ ಭಾಗಗಳನ್ನು ಸಾಗಿಸಲು ಬಳಸಿದ ಎರಡು ವಾಹನಗಳಾದ ಹೋಂಡಾ ಆಕ್ಟಿವಾ ಮತ್ತು ಮಾರುತಿ ಸ್ವಿಫ್ಟ್ ಕಾರನ್ನು ಸಾಕ್ಷ್ಯವಾಗಿ ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ಆರು ಆರೋಪಿಗಳು ಸದ್ಯ ಪೊಲೀಸ್ ವಶದಲ್ಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿದ್ದು, ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಈ ಪ್ರಕರಣದ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಮಾಡಿದ ತನಿಖಾ ತಂಡಗಳನ್ನು ಎಸ್ಪಿ ಶಂಕರ್ ಅವರು ಶ್ಲಾಘಿಸಿದರು.