ಮಂಗಳೂರು, ಜೂ23(Daijiworld News/SS): ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರ ಜನರಲ್ಲಿ ಆತಂಕ ಉಂಟು ಮಾಡಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ ಮಲೇರಿಯಾ, ಡೆಂಗ್ಯೂನಂತಹ ರೋಗಗಳ ವರದಿಯಲ್ಲಿ ಮಂಗಳೂರು ಸೇರಿಕೊಂಡಿರುವುದು, ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ.
ನಗರದ ಗೋರಕ್ಷಕದಂಡು ಮತ್ತು ಅರೆಕೆರೆಬೈಲಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ, ದ.ಕ.ಜಿಲ್ಲೆಯ ಆರೋಗ್ಯ ಇಲಾಖೆ ಪೂರ್ಣ ಪ್ರಮಾಣದಲ್ಲಿ ಫೀಲ್ಡ್ಗೆ ಇಳಿದು ಕೆಲಸ ಮಾಡುವಂತೆ ಆರೋಗ್ಯ ಇಲಾಖೆಯ ಕಮಿಷನರ್ ನೇರವಾಗಿ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ.
ಮಂಗಳೂರಿನ ಗುಜ್ಜರಕೆರೆಯ ಗೋರಕ್ಷಕದಂಡು ಹಾಗೂ ಅರೆಕರೆಬೈಲಿನಲ್ಲಿ 50ಕ್ಕೂ ಅಧಿಕ ಡೆಂಗ್ಯೂ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ನಿಟ್ಟಿನಲ್ಲಿ, ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾ ಆರೋಗ್ಯ ತಂಡದಿಂದ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿ ಸೇರಿದಂತೆ ಇಲಾಖೆಯ ಪ್ರಮುಖರು ಗೋರಕ್ಷಕದಂಡು ಮತ್ತು ಅರೆಕೆರೆಬೈಲಿನಲ್ಲಿ ಈ ಕುರಿತು ಮಾಹಿತಿ ಸಂಗ್ರಹಿಸಿದ್ದು, ಜಾಗೃತಿ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.
ಗೋರಕ್ಷಕದಂಡು ಹಾಗೂ ಅರೆಕೆರೆಬೈಲಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿಗದ ಪರಿಣಾಮ, ಮನೆಯ ಅಸುಪಾಸಿನ ಜತೆಗೆ ಮನೆಯೊಳಗೆ ಕೂಡ ಫಾಗಿಂಗ್ ಮಾಡುವಂತೆ ಮನಪಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ವಿಶೇಷವಾಗಿ ಜನತೆ ಸ್ವಚ್ಛತೆ ಕಡೆಗೆ ಗಮನ ನೀಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮುಖ್ಯವಾಗಿ ಮಳೆಯ ನೀರು ಅಸುಪಾಸಿನಲ್ಲಿ ನಿಲ್ಲುತ್ತಿದೆ. ಇದರಿಂದ ಇಂತಹ ಡೆಂಗ್ಯೂ ಕಾಯಿಲೆ ಹರಡುವ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿದ್ದು ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.