ಮಂಗಳೂರು, ಜು. 02 (DaijiworldNews/AA): ನಾಯಿ ಅಡ್ಡಬಂದ ಪರಿಣಾಮ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠದ ಕೈಗಾರಿಕಾ ವಲಯದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಮೊಗರುಕಟ್ಟೆಯಿಂದ ಗಂಜಿಮಠದ ಕಡೆಗೆ ತೆರಳುತ್ತಿದ್ದ ಕಾರು ತಡರಾತ್ರಿ ಸುಮಾರು 2 ಗಂಟೆಗೆ ನಾರ್ಲಪದವು ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಪರಿಣಾಮ ಕಾರಿನ ಎಸಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.
ಅವಘಡದಲ್ಲಿ ಕಾರು ಸಂಪೂರ್ಣ ಭಸ್ಮಗೊಂಡಿದ್ದು, ಕಾರಿನಲ್ಲಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇದು ಕೊಳಂಬೆ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಟೂರಿಸ್ಟ್ ಕಾರು ಎಂದು ತಿಳಿದು ಬಂದಿದೆ.