ಮಂಗಳೂರು, ಜು. 02 (DaijiworldNews/AA): ಕರಾವಳಿ ಭಾಗದ 110 ಅಂಗನವಾಡಿಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿವೆ. ಇದು ಅಂಗನವಾಡಿಗಳನ್ನು ಬಲಪಡಿಸುವ ಮತ್ತು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಕಲಿಕೆಗೆ ಬುನಾದಿ ಹಾಕುವ ಪ್ರಯತ್ನದ ಭಾಗವಾಗಿದೆ.

ಈ ಉಪಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ 70 ಮತ್ತು ಉಡುಪಿ ಜಿಲ್ಲೆಯ 40 ಅಂಗನವಾಡಿಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೂರ್ವ ಸಿದ್ಧತೆ ಪ್ರಾರಂಭಿಸಿದೆ. ತರಗತಿ ಆರಂಭಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಇಲಾಖೆಯಿಂದ ಮೌಖಿಕ ನಿರ್ದೇಶನ ಬಂದಿದ್ದು, ಆಗಸ್ಟ್ 2 ರಿಂದ ತರಗತಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಈ ಹಿಂದೆ ಪ್ರಸ್ತಾಪಿಸಿತ್ತು. ಆದರೆ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಕೇಂದ್ರ ತೆರೆಯುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ಕೇಂದ್ರಗಳನ್ನು ತೆರೆಯುವುದರಿಂದ ಅಂಗನವಾಡಿಗಳನ್ನು ಮುಚ್ಚಬೇಕಾಗುತ್ತದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ ಮತ್ತು ಯುಕೆಜಿ ವಿಭಾಗಗಳನ್ನು ಪ್ರಾರಂಬಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಆಗ್ರಹಿಸಿದ್ದರು. ಅದರಂತೆ ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ ಮತ್ತು ಯುಕೆಜಿ ವಿಭಾಗಗಳನ್ನು ಪ್ರಾರಂಭಿಸಲು ಸರ್ಕಾರ ಒಪ್ಪಿಗೆ ನೀಡಿತು.
"ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎಲ್ಕೆಜಿ ಮತ್ತು ಯುಕೆಜಿ ಪಾಠಗಳನ್ನು ಪರಿಣಾಮಕಾರಿಯಾಗಿ ಬೋಧಿಸಲು ಹಂತ ಹಂತವಾಗಿ ತರಬೇತಿ ಪಡೆಯಲಿದ್ದಾರೆ. ದಾಖಲಾದ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಪಠ್ಯಪುಸ್ತಕಗಳು, ಬೋಧನೆ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ" ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಗಿ ತಿಳಿಸಿದ್ದಾರೆ.
"ಅಂಗನವಾಡಿಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಸೂಕ್ತ ಮೂಲಸೌಕರ್ಯ ಹೊಂದಿರುವ ಕೇಂದ್ರಗಳನ್ನು ಆಯ್ಕೆ ಮಾಡಿ ಸ್ಮಾರ್ಟ್ ಟಿವಿಗಳು ಮತ್ತು ಪಠ್ಯಪುಸ್ತಕಗನ್ನು ಪೂರೈಸಲಾಗಿದೆ. ಸರ್ಕಾರದಿಂದ ಸೂಚನೆ ಬಂದ ತಕ್ಷಣ ತರಗತಿಗಳು ಪ್ರಾರಂಭವಾಗುತ್ತವೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಉಸ್ಮಾನ್ ಮಾಹಿತಿ ನೀಡಿದ್ದಾರೆ.