ಮಂಗಳೂರು,ಜು. 02 (DaijiworldNews/AK): ಸುದ್ದಿ ಪತ್ರಿಕೆಗಳಿಗೆ ಸುದ್ದಿಗಳನ್ನು ಪರಿಶೀಲನೆ ಮಾಡಲು ರಾತ್ರಿ ಹತ್ತು ಗಂಟೆಯವರೆಗೆ ಸಮಯವಿದೆ. ಹಾಗಾಗಿ ಇಂದು ಸುದ್ದಿ ಪತ್ರಿಕೆಗಳೇ ಅತ್ಯಂತ ವಿಶ್ವಾಸಾರ್ಹವಾಗಿದೆ ಎಂದು ದಾಯ್ಜಿವರ್ಲ್ಡ್ ಸಮೂಹದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ತಿಳಿಸಿದ್ದಾರೆ.








ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಮಾಧ್ಯಮದ ಸವಾಲು ಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಇತ್ತೀಚೆಗೆ ಸಮೀಕ್ಷೆ ಯೊಂದರ ಪ್ರಕಾರ ಶೇ.60ರಷ್ಟು ಜನರು ಮುದ್ರಣ ಮಾಧ್ಯಮವನ್ನು ನಂಬುತ್ತಾರೆ. ಶೇ.63ರಷ್ಟು ಜನರು ಟಿ.ವಿ ನ್ಯೂಸ್ ನ್ನು ನಂಬುವುದಿಲ್ಲ.ಶೇ 89 ರಷ್ಟು ಮಂದಿ ಸಾಮಾಜಿಕ ಮಾಧ್ಯಮಗಳನ್ನು ಆನ್ ಲೈನ್ ವೆಬ್ ಸೈಟ್ ಗಳನ್ನು ನಂಬುವುದಿಲ್ಲ ಎಂದವರು ತಿಳಿಸಿದ್ದಾರೆ. ಮಾದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ,ಕೃತಕ ಬುದ್ಧಿ ಮತ್ತೆಯ ತಂತ್ರಜ್ಞಾನದ ಪ್ರವೇಶವಾಗಿದೆ ಆದರೆ ಸೃಜನಶೀಲತೆ ಮೂಲಕ ಈ ಸವಾಲು ಗಳನ್ನು ಎದುರಿಸಬಹುದು. ಮಾಧ್ಯಮಗಳು ಜನರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸುವ ಬಗ್ಗೆ ಹೆಚ್ಚು ಕಾರ್ಯ ಪ್ರವೃತ್ತವಾಗಬೇಕು ಎಂದರು.
ಇಂದು ನಮ್ಮ ಪತ್ರಕರ್ತರಿಗೆ ಸಂಪೂರ್ಣ ಸ್ವಾತಂತ್ರ್ಯವಿಲ್ಲ. ಓರ್ವ ಪತ್ರಕರ್ತ ಎಷ್ಟೇ ಕ್ರಿಯಾತ್ಮಕನಾಗಿದ್ದರೂ ಕಾರ್ಪೋರೇಟ್ಸ್ ಕಂಪೆನಿಗಳು, ರಾಜಕಾರಣಿಗಳು ಹಾಗೂ ಮಾಲಕರದ್ದೇ ಎಲ್ಲಾ ನಡೆಯುತ್ತದೆ. ಸುದ್ದಿಯಲ್ಲಿ ಎಷ್ಟೇ ಸತ್ಯ ಇದ್ದರೂ ಕಾರ್ಪೋರೇಟ್ಸ್ ಕಂಪೆನಿಗಳು, ರಾಜಕಾರಣಿಗಳು ಹಾಗೂ ಮಾಲಕರು ಹೇಳಿದ್ದೇ ನಡೆಯುತ್ತದೆ ಎಂದರು.
ಯಾಕೆಂದರೆ ಇಂದು ದೇಶದ 80 ಪ್ರತಿಶತ ಮಾಧ್ಯಮ ಸಂಸ್ಥೆಗಳನ್ನು ಕಾರ್ಪೋರೇಟ್ ಕಂಪೆನಿಗಳು ಹಾಗೂ ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಮಾಧ್ಯಮ ಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಸದ್ಯ ನಾವು ಫೇಕ್ ನ್ಯೂಸ್ ಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಪತ್ರಕರ್ತರು ಇಂದು ಮಾನಸಿಕ ಒತ್ತಡದಿಂಡ ಕೂಡ ಬಳಲುತ್ತಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣದಿಂದ ನಾವು ಸವಾಲು ಎದುರಿಸುತ್ತಿದ್ದೇವೆ. ಹಾಗಾಗಿ ಈ ಎಲ್ಲಾ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ದೇಶದ ಹಲವು ಪ್ರತಿಷ್ಠಿತ ಕಾಲೇಜುಗಳ ಪತ್ರಿಕೋದ್ಯಮ ದಾಖಲಾತಿ ಪ್ರಮಾಣ ತೀರಾ ಕಡಿಮೆಯಾಗಿದೆ. ಆದರೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ ನೀವು ಬದಲಾವಣೆಗಳನ್ನು ಅಳವಡಿಸಲು ಸಿದ್ದರಿದ್ದರೆ ನಿಮ್ಮ ಭವಿಷ್ಯ ಉಜ್ವಲವಾಗಿದೆ ಎಂದು ಅವರು ತಿಳಿಸಿದರು.