ಬಂಟ್ವಾಳ , ಜು. 03 (DaijiworldNews/AK): ಅಂಗನವಾಡಿ ಕಾರ್ಯಕರ್ತರನ್ನು ಸಿ.ದರ್ಜೆಯ ನೌಕರರಾಗಿ ನೇಮಿಸಿ ಅಥವಾ ಚುನಾವಣೆಯ ಬಿ ಎಲ್ ಓ ಕೆಲಸದಿಂದ ಮುಕ್ತಗೊಳಿಸಿ ಎಂದು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ.) ರ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾಕಾರ್ಯಕರ್ತೆಯರನ್ನು BLO ಕೆಲಸದಿಂದ ಮುಕ್ತರಾಗಿಸಿದ್ದೀರಿ, ಆದರೆ ನಮಗೆ ಒತ್ತಡ ನೀಡುತ್ತೀರಿ, ಅವರಿಗೊಂದು ನ್ಯಾಯ..ನಮಗೊಂದು ನ್ಯಾಯನಾ? ಎಂದು ಪ್ರಶ್ನಿಸಿದರು.
'ಸಿ'ದರ್ಜೆಯ ನೌಕರರನ್ನು BLO ಮಾಡಿ ಎಂದು ಇತ್ತೀಚೆಗೆ ಸರಕಾರ ಅದೇಶ ಹೊರಡಿಸಿತ್ತು. ಆದರೆ ಇಲ್ಲಿನ ಕಂದಾಯ ಅಧಿಕಾರಿಗಳು ಸಿ.ದರ್ಜೆಯ ನೌಕರರನ್ನು ಕೈ ಬಿಟ್ಟು ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರಿಗೆ BLO ಜವಬ್ದಾರಿ ಹೊರಿಸುತ್ತಿದೆ. ಅಂಗನವಾಡಿ ಕಾರ್ಯಕರ್ತರು ಗೌರವಧನ ಪಡೆಯುವವರೇ ಹೊರತು ಸರ್ಕಾರಿ ಸಂಬಳ ಪಡೆಯುವ ನೌಕರರಲ್ಲ, ಹಾಗಾಗಿ ಸಿ.ದರ್ಜೆಯ ನೌಕರರನ್ನೇ BLO ಮಾಡಿ ಎಂಬ ಮನವಿಯನ್ನು ಮಾಡುತ್ತಿದ್ದೇವೆ, ತಪ್ಪಿದ್ದಲ್ಲಿ ನಮ್ಮನ್ನೂ ಸಿ ದರ್ಜೆಯ ನೌಕರರನ್ನಾಗಿ ಪರಿಗಣಿಸಿ ಎಂದವರು ಒತ್ತಾಯಿಸಿದರು.
ಅಂಗನವಾಡಿಯ ಒತ್ತಡದ ಕಾರ್ಯದ ಮಧ್ಯೆ ಬಿಎಲ್.ಒ ಕಾರ್ಯ ಕಷ್ಟವಾಗುತ್ತದೆ ಎಂದ ಅವರು, ಸರ್ವರ್ ಸಮಸ್ಯೆ ಒಂದೆಡೆಯಾದರೆ, ಪೋಷಣ್ ಟ್ರ್ಯಾಕರ್ ಎಂಬುದು ಇನ್ನೊಂದು ಸಮಸ್ಯೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಗೌರವಾಧ್ಯಕ್ಷೆ ಯಮುನ, ಜಿಲ್ಲಾ ಕೋಶಾಧಿಕಾರಿ ರೇಣುಕಾ,ಜಿಲ್ಲಾ ಉಪಾಧ್ಯಕ್ಷೆ ಗುಲಾಬಿ, ತಾಲೂಕು ಕಾರ್ಯದರ್ಶಿ ಜಯಶ್ರೀ, ಉಪಾಧ್ಯಕ್ಷೆ ವಾಣಿ ಉಪಸ್ಥಿತರಿದ್ದರು.