ಮಂಗಳೂರು, ಜು. 06 (DaijiworldNews/AK): ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಹೇಳಿ ನಂಬಿಸಿ ಮಂಗಳೂರು ಸಾರ್ವಜನಿಕರಿಂದ ಹಣ ಪಡೆದ ವಂಚಿಸಿದ ಮುಂಬೈನ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
https://daijiworld.ap-south-1.linodeobjects.com/Linode/images3/denzil_060725_visafraud.jpg
ಆರೋಪಿಗಳಾದ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45), ಫ್ಲಾಟ್ ನಂ. 103, 1 ನೇ ಮಹಡಿ, 'ಸಿ' ವಿಂಗ್, ರಾಮಚಂದ್ರ ನಿವಾಸ, ಕೋಪರಖೈರಣೆ, ನವಿ ಮುಂಬೈ, ಮಹಾರಾಷ್ಟ್ರ ಹಾಗೂ ಸಾಹುಕಾರಿ ಕಿಶೋರ್ ಕುಮಾರ್ @ ಅನಿಲ್ ಪಾಟೀಲ್ (34), ಫ್ಲಾಟ್ ನಂ 504, 5 ನೇ ಮಹಡಿ, 'ಜೆ' ವಿಂಗ್, ಎಸ್ಪಿಲಾ ಅಪಾರ್ಟ್ಮೆಂಟ್, ಪಲವಾ ನಗರ, ಮಹಾರಾಷ್ಟ್ರ, ಡೊಂಬಿವಿಲಿ, ಥಾಣೆ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಮಂಗಳೂರಿನ ಬೆಂದೂರ್ವೆಲ್ನಲ್ಲಿ ಹೈರ್ಗ್ಲೋ ಎಲಿಗಂಟ್ ಓವರ್ಸೀಸ್ ಇಂಟರ್ನ್ಯಾಷನಲ್ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಎಂಬ ಕಚೇರಿಯನ್ನು ತೆರೆದು. ವಿದೇಶಗಳಲ್ಲಿ ಉದ್ಯೋಗಗಳಿಗೆ ಕೆಲಸದ ವೀಸಾಗಳನ್ನು ಒದಗಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳಿಗೆ ನಂಬಿಕೆ ಬರುವಂತೆ ಮಾಡಿ ಅವರಿಂದ ಲಕ್ಷಾಂತರ ಹಣವನ್ನು ಪಡೆದುಕೊಂಡು ವೀಸಾ ನೀಡದೆ ಮೋಸ ಮಾಡಿದ್ದಾರೆ. ಸುಮಾರು 286 ಜನರಿಗೆ 4ಕೋಟಿ 50ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ವೀಸಾ ಕೂಡ ನೀಡಲಾಗಿಲ್ಲ.
ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2025 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 316(2), 318(4) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿಂದಿನ ಕಾರ್ಯಾಚರಣೆಯಲ್ಲಿ, ಸಿಸಿಬಿ ಮುಂಬೈ ನಿವಾಸಿ ಮಸಿಹುಲ್ಲಾ ಖಾನ್ ಎಂಬ ಆರೋಪಿಯನ್ನು ಬಂಧಿಸಿತ್ತು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಕಾರ್ಯಾಚರಣೆಯ ಭಾಗವಾಗಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಬಂಧಿಸುವಲ್ಲಿ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ತನಿಖೆ ಮುಂದುವರೆದಿದೆ.