ಬಂಟ್ವಾಳ, ಜೂ 24 (Daijiworld News/MSP): 2014 ರಲ್ಲಿ ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಮಾವೇಶದ ವೇಳೆ ಗುಂಪು ಘರ್ಷಣೆ ಬಳಿಕ ನಡೆದ ಕೊಲೆಯತ್ನ ಪ್ರಕರಣದ ಆರೋಪಿಯೋರ್ವನ ಮೇಲೆ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ಕೈ ಬಿಡುವಂತೆ ಆದೇಶಿಸಿದೆ.
ಕಾಂಗ್ರೆಸ್ ಸಮಾವೇಶದಲ್ಲಿ ಘರ್ಷಣೆ ಉಂಟಾಗಿ ಬಳಿಕ ಅದು ಗಲಭೆಗೆ ತಿರುಗಿತ್ತು. ಈ ಸಂದರ್ಭ ವೀರಕಂಬ ನಿವಾಸಿ ಹರೀಶ್ ಮೂಲ್ಯ ಅವರ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ ಆರೋಪಿಸಿ 17 ಮಂದಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತನಿಕೆ ಕೈಗೆತ್ತಿಕೊಂಡ ಬಂಟ್ವಾಳ ಪೊಲೀಸರು ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಿಂದ ಮೂರನೇ ಆರೋಪಿ ಮನ್ಸಿರ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರತ್ಯೇಕ ಪ್ರಕರಣ ತೆರೆಯಲಾಗಿತ್ತು. ಆರೋಪಿ ಮನ್ಸಿರ್ ಬೆಂಗಳೂರಿನ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ತನ್ನ ಮೇಲೆ ಇರುವ ಪ್ರಕರಣ ಕೈ ಬಿಡುವಂತೆ ಕೋರಿ ತಮ್ಮ ವಕೀಲರಾದ ಅನ್ಸಾರ್ ವಿಟ್ಲ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.
ಜೂ. 21ರಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಜಸ್ಟಿಸ್ ದಿನೇಶ್ ಕುಮಾರ್ ಅವರ ಏಕ ಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ವಕೀಲರ ವಾದವನ್ನು ಪುರಸ್ಕರಿಸಿ ಆರೋಪಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಆದೇಶಿಸಿದೆ. ಆರೋಪಿಯ ಪರ ವಕೀಲರಾದ ಮಜೀದ್ ಖಾನ್ ಮತ್ತು ಅನ್ಸಾರ್ ವಿಟ್ಲ ವಾದಿಸಿದ್ದರು.