ಸುಬ್ರಹ್ಮಣ್ಯ, ಡಿ 07: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಬಾರಿ ಡಿ 19 ರಿಂದ 24 ರ ತನಕ ನಡೆಯುವ ಕಿರುಷಷ್ಠಿ ವೇಳೆ ಧರ್ಮಸಮ್ಮೇಳನ ಸಭೆ ಇರುವುದಿಲ್ಲ. ಕೇವಲ ಸಾಂಸ್ಕೃತಿಕ ಪ್ರದರ್ಶನಕಷ್ಟೆ ಸೀಮಿತವಾಗಲಿದೆ ಎಂದು ತಿಳಿದು ಬಂದಿದೆ. ಧರ್ಮಸಮ್ಮೇಳ ಸಭೆ ರದ್ದತಿ ಮಾಡಲು ಏನು ಕಾರಣ ಎಂಬುದರ ಕುರಿತು ವ್ಯವಸ್ಥಾಪನ ಸಮಿತಿ ಷ್ಪಷ್ಟ ಪಡಿಸಿಲ್ಲ. ಕಿರುಷಷ್ಠಿ ವೇಳೆ ಆಮಂತ್ರಣ ಮುದ್ರಿಸುವ ವಿಚಾರದಲ್ಲಿ ಉಂಟಾಗುವ ಗೊಂದಲ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.
2016 ಜನವರಿ 15 ರಂದು ಕಿರುಷಷ್ಠಿ ಪ್ರಯುಕ್ತ ನಡೆದ ಧರ್ಮಸಮ್ಮೇಳನ ಸಭೆ ಹಾಗೂ 2017 ಜುಲೈ 8 ರಂದು ನಡೆದ ಮಾಸ್ಟರ್ ಪ್ಲಾನ್ ಯೋಜನೆಯಡಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಚಾರ ಪ್ರಕಾರ ತನ್ನನ್ನು ಅಧ್ಯಕ್ಷರನ್ನಾಗಿ ಮಾಡದೆ ಪದೇ ಪದೇ ಶಿಷ್ಟಚಾರ ಉಲ್ಲಂಘನೆ ಮಾಡಿರುವುದರಿಂದ ತನ್ನ ಹಕ್ಕಿಗೆ ಚ್ಯುತಿ ಬಂದಿದೆ ಎಂಬುದಾಗಿ ವಿಧಾನ ಸಭಾಧ್ಯಕ್ಷರಿಗೆ ಶಾಸಕ ಎಸ್ ಅಂಗಾರ ದೂರು ಸಲ್ಲಿಸಿದ್ದರು, ಈ ವಿಚಾರವಾಗಿ ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2017 ಅಕ್ಟೋಬರ್ 21 ರಂದು ಪತ್ರ ಬರೆದು ಅಭಿಪ್ರಾಯ ಕೇಳಿದ್ದರು. ಇದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ2017 ನ.14 ರಂದು ಸಮಿತಿ ಸಭೆ ಕರೆದು ಚರ್ಚಿಸಿ ದೇಗುಲದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ ಎಂದು ತಿಳಿದು ಬಂದಿದೆ. ಕಿರುಷಷ್ಠಿ ವೇಳೆ ಧರ್ಮಸಮ್ಮೇಳನ ರದ್ದತಿ ಆಗಿರುವುದು ನಿಜ ಎಂಬುದಾಗಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ರವಿಂದ್ರ ಹೆಚ್ ಎಂ ಕೂಡ ಒಪ್ಪಿಕೊಂಡಿದ್ದಾರೆ.