ಉಡುಪಿ, ಜೂ 24 (Daijiworld News/MSP): ಕೊರಂಗ್ರಪಾಡಿ ಜಂಕ್ಷನ್ ಬಳಿ ಜೂ.19 ರ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ರೋಶನ್ (16) ಜೂ.24 ರ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಪಣಿಯಾಡಿ ಬುಡ್ನಾರು ನಿವಾಸಿ ರಿಯಾಝ್ ಎಂಬವರ ಏಕೈಕ ಪುತ್ರರಾಗಿದ್ದಾರೆ.
ಘಟನೆಯ ವಿವರ: ಬುಡ್ನಾರು ನಿವಾಸಿ ರಿಯಾಜ್ ಅವರು ತನ್ನದೇ ರಿಕ್ಷಾದಲ್ಲಿ ತನ್ನ ಮಗನನ್ನು ಶಾಲೆಗೆಂದು ಬುಧವಾರ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ರಿಕ್ಷಾಕ್ಕೆ ಉಡುಪಿಯಿಂದ ಕಾರ್ಕಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು ತಂದೆ - ಮಗ ಇಬ್ಬರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಫಲವಾಗಿ ರಿಯಾಜ್ ಚೇತರಿಸಿಕೊಂಡರೆ, ಗಂಭೀರ ಗಾಯಕೊಂಡಿದ್ದ ಅವರ ಪುತ್ರ ರೋಶನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಇಂದ್ರಾಳಿ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ