ಮಂಗಳೂರು, ಜೂ 24 (Daijiworld News/SM): ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿರುವ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜೂನ್ 23ರ ರವಿವಾರದಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದ. ಈ ವೇಳೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ 450.86 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಗೇರ್ ವೀಲ್ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ನಡೆಸಿದ್ದ ಎಂದು ತಿಳಿದು ಬಂದಿದೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಜೂನ್ 24ರಂದು ಮತ್ತೋರ್ವ ಮಹಿಳೆ ಬುರ್ಕಾದೊಳಗಿಟ್ಟುಕೊಂಡು ಚಿನ್ನದ ಸರ ಹಾಗೂ ಬಳೆಗಳನ್ನು ಸಾಗಾಟ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ. ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 239 ಗ್ರಾಂ ಚಿನ್ನವನ್ನು ಸಾಗಾಟ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಎರಡು ಪ್ರಕರಣದಲ್ಲಿ ಸಾಗಾಟ ನಡೆಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.