ಕುಂದಾಪುರ, ಜೂ 24 (Daijiworld News/SM): ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಾಂತಾ ಗೋಪಾಲಕೃಷ್ಣ ಅವರ ಏಕಮಾತ್ರ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವಿರೋಧ ಆಯ್ಕೆ ನಡೆದಿದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಜಾನಕಿ ಬಿಲ್ಲವ ಅವಿಶ್ವಾಸ ಗೊತ್ತುವಳಿಯಿಂದ ಖಾಲಿಯಾದ ಸ್ಥಾನಕ್ಕೆ ಜೂನ್ 24ರಂದು ಚುನಾವಣೆ ನಡೆದಿತ್ತು. 26 ಸದಸ್ಯ ಬಲವನ್ನು ಹೊಂದಿರುವ ಈ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿ ಶಾಂತಾ ಗೋಪಾಲಕೃಷ್ಣ ನಾಮಪತ್ರ ಸಲ್ಲಿಸಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದಿರುವುದರಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯೆ ಸೇರಿ 19 ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ ಚುನಾವಣಾಧಿಕಾರಿಯಾಗಿದ್ದರು.