ಉಡುಪಿಯ, ಜು. 17(DaijiworldNews/TA): ಕಾಪು ತಾಲೂಕಿನ ಎರ್ಮಾಳ್ ಗ್ರಾಮದ ಅಳ್ವೆಕೋಡಿ ಪ್ರದೇಶದ ತಾರಾನಾಥ್ ಎಂಬವರ ಕುಟುಂಬ ನೆರೆ ನೀರಿನಲ್ಲೇ ನಡೆದುಕೊಂಡು ಬಂದು ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿದು ಸ್ವತಹ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಶೀಘ್ರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ.

ತಾರಾನಾಥ್ ರವರ ಮಕ್ಕಳಾದ ಪ್ರಜ್ಞಾ ಮತ್ತು ಪ್ರಜ್ವಲ್ ಕಾಲೇಜಿಗೆ ಹೋಗುವಾಗ ನೆರೆ ನೀರಿನಲ್ಲೇ ತೊಯ್ದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಜೊತೆಗೆ ಪುಸ್ತಕದ ಚೀಲವನ್ನೂ ಹೊತ್ತೊಯ್ಯಬೇಕು. ಜೀವಭಯದಿಂದಲೇ ಕಾಲೇಜಿಗೆ ಹೋಗಬೇಕಾಗಿದೆ. ತಾರಾನಾಥ್ ರವರು ಮನೆಗೆ ದಿನಸಿ ಸಾಮಾನು, ಅಗತ್ಯ ವಸ್ತುಗಳನ್ನು ತರುವುದಕ್ಕೂ ಇದೇ ನೆರೆ ನೀರಿನಲ್ಲೇ ಈಜಿಕೊಂಡು ಹೋಗಬೇಕಿದೆ. ಇವರ ಸಮಸ್ಯೆ ಬಗ್ಗೆ ತಿಳಿದ ತಹಶಿಲ್ದಾರ್ ಪ್ರತಿಭಾ ಆರ್ ಸ್ವತಹ ಈ ಪ್ರದೇಶಕ್ಕೆ ತೆರಳಿದ್ದಾರೆ. ತಹಶಿಲ್ದಾರ್ ಅವರು ನೀರಿನಲ್ಲೇ ಧೈರ್ಯದಿಂದ ಹೆಜ್ಜೆ ಇಡುತ್ತಾ ಆ ಒಂಟಿ ಮನೆ ತಲುಪಿ ಆ ಕುಟುಂಬವನ್ನು ಭೇಟಿಯಾಗಿದ್ದಾರೆ.
ಕುಟುಂಬದ ಪರಿಸ್ಥಿತಿಯನ್ನು ಕಂಡು ಸಾಂತ್ವನ ಹೇಳಿದ್ದಾರೆ. ಶೀಘ್ರವೇ ಈ ನೆರೆ ಇಳಿಸುವ ಪರಿಹಾರ ಕಂಡು ಹುಡುಕುವುದಾಗಿ ಭರವಸೆ ನೀಡಿದ್ದಾರೆ. ಸಮೀಪದ ಕಾಮಿನಿ ನದಿ ಪಡುಬಿದ್ರಿಯ ಕಡೆಯಿಂದ ಹರಿದು ಸಮುದ್ರಕ್ಕೆ ಸೇರುತ್ತದೆ. ಅಲ್ಲಿ ಹೂಳು ತುಂಬಿಕೊಂಡು ಕಸ ಸೇರಿಕೊಂಡು ಕಲ್ಮಶ ತುಂಬಿಕೊಂಡಿರುವ ಕಾರಣ ಅಡ್ವೆಕೋಡಿಯ ಗದ್ದೆಗಳಲ್ಲಿ ಜಲಾವೃತವಾಗುತ್ತದೆ. ಇದರಿಂದಲೇ ಈ ಕುಟುಂಬ ಸಂಕಷ್ಟ ಅನುಭವಿಸಬೇಕಿದೆ. ತಹಶಿಲ್ದಾರ್ ಪ್ರತಿಭಾ ಆರ್. ರವರು ಈ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಮಿನಿ ನದಿ ಸ್ವಚ್ಚಗೊಳಿಸುವುದಾಗಿ ಭರವಸೆ ನೀಡಿದ್ದಾರೆ.