ಉಡುಪಿ,ಜು. 17 (DaijiworldNews/AK): ಜುಲೈ 15 ರಂದು ಮುಂಜಾನೆಯಿಂದ ಉಡುಪಿ ಜಿಲ್ಲೆಯಲ್ಲಿ ನಿರಂತರ ಮತ್ತು ವ್ಯಾಪಕ ಮಳೆಯಾಗುತ್ತಿದೆ. ಕಾಪು ತಾಲ್ಲೂಕಿನ ಪಡುಬಿದ್ರಿಯ ಪಾದೆಬೆಟ್ಟು ಪ್ರದೇಶದಲ್ಲಿ ನೀರಿನ ಮಟ್ಟ ವೇಗವಾಗಿ ಏರಿದ್ದು, ಹಲವಾರು ವಸತಿ ಮನೆಗಳು ಜಲಾವೃತಗೊಂಡಿವೆ. ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಅವರ ನೇತೃತ್ವದಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಐದು ಮನೆಗಳ 24 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.









ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ನೀರು ನುಗ್ಗಿ ಪ್ರವಾಹ ಉಂಟಾಗಿದೆ. ಉಡುಪಿ, ಬ್ರಹ್ಮಾವರ, ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ ಮತ್ತು ಕಾಪು ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದ್ದು, ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.
ಪಾದೆಬೆಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ಐದು ಮನೆಗಳ 24 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಕಾಮಿನಿ ನದಿಯಲ್ಲಿನ ಪ್ರವಾಹವು ತಗ್ಗು ಪ್ರದೇಶಗಳಲ್ಲಿ ಕಂಡುಬಂದ ಹಿನ್ನಲೆ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ನೆರೆಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾನಿಯನ್ನು ಕಡಿಮೆ ಮಾಡಲು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿತು.
ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ನದಿಗಳು ಮತ್ತು ಪ್ರವಾಹ ಪೀಡಿತ ವಲಯಗಳ ಬಳಿ ವಾಸಿಸುವ ಜನರು ಜಾಗರೂಕರಾಗಿರುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.