ಕುಂದಾಪುರ, ಜೂ 24 (Daijiworld News/SM): ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಸಂಭವಿಸಿದರೆ ಗುತ್ತಿಗೆ ಸಂಸ್ಥೆಯ ಮೇಲೆ ದೂರು ದಾಖಲಿಸಲು ಅವಕಾಶಗಳಿದೆ. ಈ ಬಗ್ಗೆ ದೂರು ಬಂದರೆ ದಾಖಲಿಸಿಕೊಳ್ಳಲಾಗುತ್ತದೆ. ರಸ್ತೆ ಕಾಮಗಾರಿಯ ಅಪಾಯಕಾರಿಯ ಬಗ್ಗೆ ಸಾರ್ವಜನಿಕ ದೂರು ಪರಿಗಣಿಸಿ ಕಂಪೆನಿಗಳಿಗೆ ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದು ಡಿ.ವೈ.ಎಸ್.ಪಿ ದಿನೇಶ ಕುಮಾರ್ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ನಲ್ಲಿ ಜೂ.24ರಂದು ನಡೆದ 16ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭ ತಾ.ಪಂ.ಸದಸ್ಯ ಮಹೇಂದ್ರ ಪೂಜಾರಿ ಅವರು ಮಾತನಾಡಿ, ಐಆರ್ಬಿ ಕಂಪೆನಿ ಕುಂದಾಪುರದಿಂದ ಚತುಷ್ಪಥ ಕಾಮಗಾರಿ ನಡೆಸುತ್ತಿದ್ದು, ಶಿರೂರು ತನಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಕೆಲವೊಂದು ತಿರುವುಗಳು, ಸರಿಯಾದ ಮಾರ್ಗಸೂಚಿ ಅಳವಡಿಕೆ ಮಾಡದಿರುವುದು ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಅಪಘಾತಗಳಿಗೆ ಎಡೆಮಾಡಿಕೊಡುತ್ತಿರುವ ನಿರ್ಮಾಣ ಕಂಪೆನಿಯ ಮೇಲೆ ಎಫ್ಐಆರ್ ದಾಖಲಿಸಲು ಅವಕಾಶ ಇದೆಯಾ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಿವೈ ಎಸ್ಪಿ, ಎಫ್ಐಆರ್ ದಾಖಲಿಸಲು ಅವಕಾಶವಿದೆ. ಇದರಿಂದ ಪ್ರಾಣಹಾನಿ ತುಂಬಾ ಆಗಿದೆ. ಸಮಸ್ಯೆ ಸರಿಪಡಿಸುವಂತೆ ತಿಳಿಸಿದ್ದೇವೆ. ಕೆಲವೆಡೆ ದ್ವಿಮುಖ ಸಂಚಾರವಿದೆ. 20ನೇ ತಾರೀಕಿನೊಳಗೆ ಎರಡು ಕಡೆ ಸೇತುವೆ ಕೆಲಸ ಮುಗಿಸಿ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಅಸುರಕ್ಷಿತ ಶಾಲಾ ವಾಹನ ಪಯಣ
ಶಾಲಾ ವಾಹನಗಳು ಪಾಲಿಸಬೇಕಾದ ನಿಯಮವಳಿಗಳ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ರಿಕ್ಷಾಗಳಲ್ಲಿ 6 ಮಕ್ಕಳನ್ನು ಸಾಗಿಸಬಹುದು. ಜಾಸ್ತಿ ಮಕ್ಕಳನ್ನು ತುಂಬಿಸುವುದು ಕಂಡು ಬಂದರೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಒಮ್ನಿಯಲ್ಲಿ 8 ಮಕ್ಕಳನ್ನು ಕರೆದೊಯ್ಯಬಹುದು. ನಿಗದಿತ ಸಂಖ್ಯೆಗಿಂತ ಜಾಸ್ತಿ ಮಕ್ಕಳನ್ನು ಕರೆದೊಯ್ಯುವುದು ಕಂಡು ಬಂದರೆ ಆ ವಾಹನ ಚಾಲಕರ ಚಾಲನ ಪರವಾನಿಗೆಯನ್ನು ಮೂರು ತಿಂಗಳುಗಳ ಕಾಲ ಅಮಾನತು ಮಾಡಲು ಆರ್.ಟಿ.ಓಗೆ ಸೂಚಿಸಲಾಗುವುದು ಎಂದರು.