ಪುತ್ತೂರು, ಜು. 17(DaijiworldNews/TA): ಕಡಬ ತಾಲೂಕಿನ ನೆಲ್ಯಾಡಿ ಬಳಿಯ ಕೊಕ್ಕಡ ಗ್ರಾಮದ ಮಣ್ಣಗುಂಡಿ ಬಳಿ ಗುರುವಾರ ಗುಡ್ಡ ಕುಸಿತ ಸಂಭವಿಸಿದ ಪರಿಣಾಮ ಮಂಗಳೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಗುಡ್ಡ ಕುಸಿತದಿಂದಾಗಿ, ಮಣ್ಣು ಹೆದ್ದಾರಿಗೆ ಬಿದ್ದು ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ತೆರವು ಕಾರ್ಯಾಚರಣೆಗಳು ಚುರುಕಾಗಿ ಜರುಗುತ್ತಿದ್ದು ಸಂಜೆ ವರೆಗೂ ತೆರವು ಕಾರ್ಯ ಮುಂದುವರಿಯುವ ನಿರೀಕ್ಷೆಯಿದೆ. ಈ ಮಧ್ಯೆ, ಎಲ್ಲಾ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.
ಹೆಚ್ಚುವರಿಯಾಗಿ, ಬಂಟ್ವಾಳ ತಾಲೂಕಿನ ಪೆರಮೊಗರು ಬಳಿ ಮತ್ತೊಂದು ಸಣ್ಣ ಗುಡ್ಡಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಪ್ರದೇಶವು ನಾಲ್ಕು ಪಥದ ಹೆದ್ದಾರಿಯ ಭಾಗವಾಗಿರುವುದರಿಂದ ಈ ಭಾಗದಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.