ಬಂಟ್ವಾಳ, ಜು. 17(DaijiworldNews/TA): ತಾಲೂಕಿನಾದ್ಯಂತ ಮಳೆರಾಯ ಗುರುವಾರ ಬೆಳಗ್ಗೆ ಸ್ವಲ್ಪ ಬಿಡುವು ಪಡೆದುಕೊಂಡಿದ್ದು, ಅಪರಾಹ್ನದ ಬಳಿಕ ಆರ್ಭಟ ಮುಂದುವರಿದಿದೆ. ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ವಿವಿಧೆಡೆ ಮಳೆ ಹಾನಿ ಉಂಟಾಗಿದ್ದು, ಕಂದಾಯ ಇಲಾಖೆಯಿಂದ ರಕ್ಷಣಾ ಕಾರ್ಯಗಳೂ ಭರದಿಂದ ಸಾಗುತ್ತಿದೆ. ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ರಸ್ತೆಬದಿ ಮಣ್ಣು ಕುಸಿಯುತ್ತಿದ್ದು ಮುನ್ನೆಚ್ಚರಿಕೆಯಾಗಿ ಟೇಪ್ ಅಳವಡಿಸಲಾಗಿದ್ದು, ರಸ್ತೆ ಮುಚ್ಚಲಾಗಿದೆ, ಶಂಭೂರು ಗ್ರಾಮದ ಕೆಲೆಂಜಿಗುರಿ ಎಂಬಲ್ಲಿ ಉಲ್ಲಾಸ್ ಫ್ಯಾಕ್ಟರಿಯ ತಡೆಗೋಡೆ, ದಿನೇಶ್ ಎಂಬವರಿಗೆ ಸೇರಿದ ತೋಟಕ್ಕೆ ಕುಸಿದು ಬಿದ್ದಿರುತ್ತದೆ, ಪುದು ಗ್ರಾಮದ ಅಮೇಮಾರ್ ನಿವಾಸಿ ಅಬ್ದುಲ್ ಖಾದರ್ ರವರ ಮನೆ ಪೂರ್ತಿ ಹಾನಿಯಾಗಿದೆ.











ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ. ಕಾವಳಮುಡೂರು ಗ್ರಾಮದ ಕಲಾಯಿ ಎಂಬಲ್ಲಿ ತೋಡಿಗೆ ಇರುವ ಕಾಲು ಸಂಕದ ಬದಿ ತೀವ್ರ ಮಳೆಗೆ ಕುಸಿತ ಉಂಟಾಗಿ ಅಪಾಯದ ಸ್ಥಿತಿಯಲ್ಲಿ ಇರುವುದರಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಸದ್ರಿ ಕಾಲು ದಾರಿ ಉಪಯೋಗಿಸುವ 4 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಯಾಗಿ ಬೇರೆ ಕಾಲು ದಾರಿ ಇರುತ್ತದೆ. ಕೇಪು ಗ್ರಾಮದ ಕಟ್ಟೆ ಎಂಬಲ್ಲಿ ತೋಡಿನ ಬದಿ ಕಲ್ಲಿನ ತಡೆಗೋಡೆ ಕುಸಿದು ನೀರ್ಕಜೆ - ಮಣಿಯರಪಾದೆ ರಸ್ತೆ ಬಿರುಕು ಬಿಟ್ಟಿರುತ್ತದೆ. ರಸ್ತೆ ಕುಸಿದು ಬೀಳುವ ಸಂಭವವಿದ್ದು, ಮುಂಜಾಗೃತಾ ಕ್ರಮವಾಗಿ ಸದ್ರಿ ರಸ್ತೆ ಬಂದ್ ಮಾಡಲಾಗಿದೆ.
ಮೇರಮಜಲು ಗ್ರಾಮದ ಅಬ್ಬೆಟ್ಟು ಪಾರಾಜೆ ರಸ್ತೆಗೆ ಬಿದ್ದ ಮರವನ್ನು ಪಂಚಾಯತ್ ನಿಂದ ತೆರವು ಗೊಳಿಸಲಾಗಿದೆ. ಕರಿಯಂಗಳ ಗ್ರಾಮದ ಕಲ್ಕುಟ್ಟ ಎಂಬಲ್ಲಿ ಗುಡ್ಡೆ ಕುಸಿದು ರಸ್ತೆ ಮುಚ್ಚಿದೆ. ಅಮ್ಟಾಡಿ ಗ್ರಾಮದ ಕುಪ್ರಾಡಿ ಎಂಬಲ್ಲಿ ರಾಬರ್ಟ್ ಮಿನಿಜಸ್ ಬಿನ್ ಮೈಕಲ್ ಮೆನೇಜಸ್ ಎಂಬವರ ಜಮೀನಿನಲ್ಲಿ ಗುಡ್ಡ ಕುಸಿತ ಇದರಿಂದಾಗಿ ತೋಡಿಗೆ ಮಣ್ಣು ಬಿದ್ದು ನೀರು ತೋಟದಲ್ಲಿ ಹರಿಯುತ್ತಿದೆ. ಬಂಟ್ವಾಳ ಕಸಬಾ ಗ್ರಾಮದ ಮಂಡಾಡಿ ಎಂಬಲ್ಲಿ ಸಂಜೀವ ಬಿನ್ ಗುರುವ ಅವರ ವಾಸದ ಮನೆಯ ಗೋಡೆ ಹಾಗೂ ಶೌಚಾಲಯ ಗೋಡೆ ಕುಸಿದು ತೀವ್ರ ಹಾನಿ ಆಗಿರುತ್ತದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಆಗಿರುವುದಿಲ್ಲ. ಮೇರಮಜಲು ಗ್ರಾಮ ದ ಅಬ್ಬೆಟ್ಟು ಪಾರಾಜೆ ರಸ್ತೆಗೆ ಗುಡ್ಡ ಜರಿದು ಮರ ರಸ್ತೆಗೆ ಬಿದ್ದಿದೆ. ಶಂಭೂರು ಗ್ರಾಮದ ಕೆದುಕೊಡಿ ಎಂಬಲ್ಲಿ ಜಿಲ್ಲಾ ಮುಖ್ಯ ರಸ್ತೆ. ಪೆರುವಾಯಿ ಗ್ರಾಮದ ಕೆದುವಾರ್ ಎಂಬಲ್ಲಿ ಕುದ್ದುಪದವು - ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆಗೆ ಗುಡ್ಡ ಕುಸಿದಿದೆ. ಮಳೆಹಾನಿ ಸಂಭವಿಸಿದ ಸ್ಥಳಗಳಿಗೆ ಕಂದಾಯ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ, ಪೂರಕ ಸ್ಪಂದನೆ ನೀಡಿದ್ದಾರೆ.