ಕಾಸರಗೋಡು, ಜೂ 24 (Daijiworld News/SM): ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಕನ್ನಡಿಗರಿಗೆ ಮೀಸಲಿರಿಸಿದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕಗೊಳಿಸಬೇಕು. ರಾಜ್ಯ ಭಾಷಾ ಅಲ್ಪ ಸಂಖ್ಯಾತ ಸಮಿತಿಯಲ್ಲಿ ಕಾಸರಗೋಡಿನ ಕನ್ನಡ ಪ್ರತಿನಿಧಿಯನ್ನು ಸೇರ್ಪಡೆಗೊಳಿಸಬೇಕು. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ಅಂಗನವಾಡಿಗಳಲ್ಲಿ ಕನ್ನಡ ಬಲ್ಲ ಮೇಲ್ವಿಚಾರಕಿಯರನ್ನು ನೇಮಕಗೊಳಿಸಬೇಕು. ಮಂಜೇಶ್ವರ ತಾಲೂಕಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಬೇಕು. ಕನ್ನಡ ಎಲ್ ಡಿ ಕ್ಲರ್ಕ್ ಪರೀಕ್ಷೆ ಕೂಡಲೇ ನಡೆಸಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿಯನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಿರಂತರವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಪ್ರತ್ಯೇಕ ಆಯೋಗಕ್ಕೆ ರೂಪು ನೀಡಬೇಕು. ಈ ಮೂಲಕ ಕನ್ನಡಿಗರ ಹಕ್ಕು ರಕ್ಷಿಸಬೇಕು ಎಂದು ಶಾಸಕರು ಒತ್ತಾಯಿಸಿದರು.