ಬಂಟ್ವಾಳ, ಜು. 22 (DaijiworldNews/AA): ವಿಟ್ಲ ಸಮೀಪ ವೀರಕಂಬ ಗ್ರಾಮದ ಕೆಲಿಂಜ ಜಂಕ್ಷನ್ನಲ್ಲಿ ಮಿನಿ ಟಿಪ್ಪರ್ ಮತ್ತು ಆಲ್ಲೋ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನ ಚಾಲಕ ಮೃತಪಟ್ಟು, ಅವರ ಸಹೋದರಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.


ಅನೀಶ್ ಅನಂತಾಡಿ (34) ಮೃತ ದುರ್ದೈವಿ.
ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿಗೆ, ವಿಟ್ಲದಿಂದ ಕಲ್ಲಡ್ಕ ಕಡೆಗೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಅನೀಶ್ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ.
ಅನೀಶ್ ಅವರು ಅನಂತಾಡಿ ಆಶ್ವತ್ತಡಿ ಮೂಲದವರು. ಅವರು ಕೇವಲ ಎರಡು ತಿಂಗಳ ಹಿಂದೆ ವಿವಾಹವಾಗಿದ್ದು, ಕುಟುಂಬದ ಸದಸ್ಯರನ್ನು ವಿಟ್ಲಕ್ಕೆ ಬಿಟ್ಟು ಬರಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.