ಮಂಗಳೂರು, ಜು. 22 (DaijiworldNews/AA): ನಂತೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನ ಸಾವಿಗೆ ಕಾರಣನಾದ ಮೀನು ಸಾಗಾಟದ ಕಂಟೈನರ್ ಲಾರಿ ಚಾಲಕ ಮೊಹಮ್ಮದ್ ಜಾಫರ್ ಸಾಬ್(32) ಎಂಬಾತನಿಗೆ ಮಂಗಳೂರಿನ ಜೆಎಂಎಫ್ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ ಇ.ಎಸ್ ಅವರು ಆರು ತಿಂಗಳ ಜೈಲು ಶಿಕ್ಷೆ ಮತ್ತು 9,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2021ರ ಸೆಪ್ಟೆಂಬರ್ 28ರಂದು ಮಂಗಳೂರಿನ ನಂತೂರು ವೃತ್ತ ಮತ್ತು ಪಂಪ್ವೆಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ನಡೆದಿತ್ತು. ಮೀನು ತುಂಬಿದ ಕಂಟೈನರ್ ಲಾರಿ ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿದ್ದ ಮಾನಸ್ ರಾಮನಾಥ್ ಉಗಲೆ (23) ಲಾರಿಯ ಹಿಂದಿನ ಚಕ್ರಗಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಅಪಘಾತದ ಸಂಬಂಧ ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅವರು ಚಾಲಕನ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ರೈ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ, ವಾದ ಮಂಡಿಸಿದ್ದಾರೆ.