ಕಾಸರಗೋಡು, ಜು. 22 (DaijiworldNews/AA): ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಬಿಗಿದು 12 ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಚೆಂಗಳ ಸಮೀಪದ ನಾಲ್ಕನೇ ಮೈಲ್ ನಲ್ಲಿ ನಡೆದಿದೆ.

ಆಂಧ್ರ ಪ್ರದೇಶ ಚಿತ್ತೂರು ಮೂಲದ ಮಸ್ತಾನ್ ಹಾಗೂ ನಸ್ರಿನಾ ದಂಪತಿ ಪುತ್ರ ಉಮ್ಮರ್ ಫಾರೂಕ್ ಮೃತಪಟ್ಟ ಬಾಲಕ.
ಚೆಂಗಳ ನಾಲ್ಕನೇ ಮೈಲ್ ನ ಕ್ವಾಟರ್ಸ್ ನಲ್ಲಿ ವಾಸವಾಗಿದ್ದು, ಸೋಮವಾರ ಮಧ್ಯಾಹ್ನ ಮನೆಯ ಒಳಗಡೆಯ ಅಡ್ಡಕ್ಕೆ ಸೀರೆ ಕಟ್ಟಿ ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಈ ದುರ್ಘಟನೆ ನಡೆದಿದೆ. ಫಾರೂಕ್ ನ ಇಬ್ಬರು ಸಹೋದರಿಯರು ಹೊರಗಡೆ ಆಟವಾಡುತ್ತಿದ್ದರು. ತಂದೆ - ತಾಯಿ ಹೊರಗಡೆ ತೆರಳಿದ್ದರು. ತಾಯಿ ಮನೆಗೆ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ. ಇವರ ಕುಟುಂಬ ಮೂರು ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದು, ಆರು ತಿಂಗಳ ಹಿಂದೆಯಷ್ಟೇ ಕಾಸರಗೋಡಿಗೆ ಬಂದು ಚೆಂಗಳದ ಬಾಡಿಗೆ ಕ್ವಾಟರ್ಸ್ ನಲ್ಲಿ ವಾಸವಾಗಿದೆ.