ಪುತ್ತೂರು, ಜು. 23 (DaijiworldNews/AA): ಕೆ.ಎಸ್.ಆರ್.ಟಿಸಿ ಬಸ್ ನಲ್ಲಿ ವ್ಯಕ್ತಿಯೋರ್ವ ಯುವತಿಯ ಪಕ್ಕದಲ್ಲಿ ಕುಳಿತು ಅನುಚಿತವಾಗಿ ವರ್ತಿಸಿದ ಘಟನೆ ಜುಲೈ 22ರಂದು ನಡೆದಿದೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಪ್ರಕರಣ ಸಂಬಂಧ ಮಂಗಳೂರಿನ ಮಹಮ್ಮದ್ ತೌಹೀದ್ ಎಂಬಾತನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ದೂರುದಾರ ಯುವತಿ ಜುಲೈ 22ರಂದು ಕಾಲೇಜು ಮುಗಿಸಿಕೊಂಡು ಸಂಜೆ ಮಂಗಳೂರಿನಿಂದ ಪುತ್ತೂರು ಬರುವ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ ಸುಮಾರು 6:30 ಗಂಟೆಗೆ ಬಸ್ಸು ಬಂಟ್ವಾಳ ತಾಲೂಕಿನ ಮಾಣಿ ಬಳಿ ತಲುಪಿದಾಗ ದೂರುದಾರರ ಪಕ್ಕದಲ್ಲಿ ಕುಳಿತಿದ್ದ ಆರೋಪಿಯು ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಆಕೆಯು ಆರೋಪಿಗೆ ಬೈದಿದ್ದಾರೆ. ಬಳಿಕ ಈ ವಿಚಾರವನ್ನು ದೂರುದಾರರು ಅವರ ತಂದೆ ಕರೆ ಮಾಡಿ ತಿಳಿಸಿದ್ದಾರೆ.
ನಂತರ ಬಸ್ ಪುತ್ತೂರು ಕೆಎಸ್ಅರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಆ ವ್ಯಕ್ತಿಯು ಬಸ್ಸಿನ ತುರ್ತು ನಿರ್ಗಮನ ಕಿಟಕಿಯ ಮೂಲಕ ಹೊರಗೆ ಹಾರಲು ಪ್ರಯತ್ನಿಸಿದ್ದಾನೆ. ಈ ವೇಳೆ ದೂರುದಾರರ ತಂದೆ ಮತ್ತು ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ದೂರುದಾರರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 56/2025 ಕಲಂ: 75 BNS 2023 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.