ಪುತ್ತೂರು, ಜು. 23 (DaijiworldNews/AA): ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ 2024-25ರ ಸ್ವಚ್ಛ ಸರ್ವೇಕ್ಷಣದಲ್ಲಿ ಪುತ್ತೂರು ನಗರಸಭೆಯು ಕರ್ನಾಟಕದಲ್ಲಿ 8ನೇ ಸ್ಥಾನವನ್ನು ಗಳಿಸಿದೆ.

ಘನತ್ಯಾಜ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಗರವು ಕೈಗೊಂಡಿರುವ ಸಮಗ್ರ, ನವೀನ ಮತ್ತು ನಾಗರಿಕ-ಕೇಂದ್ರಿತ ವಿಧಾನದಿಂದಾಗಿ ಕರ್ನಾಟಕದ ಅಗ್ರ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುತ್ತೂರು ಸ್ಥಾನ ಪಡೆದಿದೆ. ನಗರವು ಶೇ. 100ರಷ್ಟು ಮನೆ-ಮನೆ ತ್ಯಾಜ್ಯ ಸಂಗ್ರಹಣೆಯನ್ನು ಸಾಧಿಸಿದ್ದು ಹಾಗೂ ಪರಿಣಾಮಕಾರಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ನಗರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋಗ್ಯಾಸ್ ಘಟಕ ಮತ್ತು ಇ-ತ್ಯಾಜ್ಯ ಸಂಗ್ರಹಣಾ ಘಟಕವನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ಸ್ವಚ್ಛತಾ ಉಪಕ್ರಮಗಳನ್ನು ಕೈಗೊಂಡಿದ್ದು, ಸಮೀಕ್ಷೆಯಲ್ಲಿ ವಿಶೇಷ ಮಾನ್ಯತೆ ಗಳಿಸಿದೆ. ಈ ಹಿಂದೆಯೂ ಪುತ್ತೂರು ಸ್ವಚ್ಛ ಸರ್ವೇಕ್ಷಣ ಉಪಕ್ರಮದ ಅಡಿಯಲ್ಲಿ ಸ್ಥಾನ ಗಳಿಸಿತ್ತು.
"ಕಳೆದ ಬಾರಿ ನಾವು ರಾಜ್ಯದ ಸಿಎಂಸಿ ವಿಭಾಗದಲ್ಲಿ 6ನೇ ಸ್ಥಾನದಲ್ಲಿದ್ದೆವು. ಈ ಬಾರಿ ನಾವು 2ನೇ ಸ್ಥಾನಕ್ಕೆ ತಲುಪಿದ್ದೇವೆ" ಎಂದು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ತಿಳಿಸಿದ್ದಾರೆ.