ಬಂಟ್ವಾಳ, ಜು. 23 (DaijiworldNews/AA): ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ. ಅವರು ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ರಂಗಭೂಮಿಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಕಲಾಸೇವೆಗೈದಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರಿಂದ ತರಬೇತಿ ಪಡೆದ ರಮೇಶ್ ಕಲ್ಲಡ್ಕ ಕಲಾಸಂಗಮದ ಎಲ್ಲಾ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
'ಶಿವದೂತಗುಳಿಗೆ' ನಾಟಕದ ಭೀಮಾರಾವ್ ಪಾತ್ರ ಅವರಿಗೆ ವ್ಯಾಪಕ ಮನ್ನಣೆ ತಂದುಕೊಟ್ಟಿದೆ. ಶಿವಾಜಿ ನಾಟಕದಲ್ಲೂ ಅವರು ನಿರ್ವಹಿಸಿದ ದಾದ ಕೊಂಡೆಯ ಪಾತ್ರದ ಅಭಿನಯವು ವ್ಯಾಪಕ ಗಮನ ಸೆಳೆದಿತ್ತು.
ರಂಗಭೂಮಿಯಲ್ಲಿ ಶಿಸ್ತಿನ ಕಲಾವಿದರಾಗಿದ್ದ ರಮೇಶ್ ಕಲ್ಲಡ್ಕ ಅವರು, ಸರಳ ಸೌಮ್ಯಸ್ವಭಾವವರು. ಕಲಾಸಂಗಮದ ಮೂಲಕ ಮುಂಬೈ, ಬೆಂಗಳೂರು ಸಹಿತ ಬೇರೆ ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದರು.
ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ 11 ಗಂಟೆಗೆ ಕಲ್ಲಡ್ಕದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ.