ಮಂಗಳೂರು, ಜೂ 25 (Daijiworld News/MSP): " ಅಪರಿಚಿತ ಕಾರೊಂದು ಬಂದು ಪಾದಚಾರಿಯಾಗಿದ್ದ ನಮಗೆ ಡಿಕ್ಕಿ ಹೊಡೆದಿದೆ" ಎಂದು ನಗರದ ನಿವಾಸಿಯೊಬ್ಬರು ದೂರು ನೀಡಲು ಸಂಬಂಧಪಟ್ಟ ಠಾಣೆಗೆ ಹೋದಾಗ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ದೂರಿ ನಗರ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿದ್ದು, ಅದಕ್ಕೆ ಆಯುಕ್ತರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಲಿಖಿತ್ ರೈ ಎಂಬವರು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮೂಲಕ ದೂರು ನೀಡಿದ್ದು, ದೆಹಲಿ ನೋಂದಾಯಿತ ಕಾರು ರಾತ್ರಿ ವೇಳೆ ಪಾದಾಚಾರಿಯಾಗಿ ಹೋಗುತ್ತಿದ್ದ ನಮಗೆ ಢಿಕ್ಕಿ ಹೊಡೆದಿದ್ದು, ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ್ರೆ ಅಲ್ಲಿ ಈ ಬಗ್ಗೆ ದೂರು ಸ್ವೀಕರಿಸಲಿಲ್ಲ ಎಂದು ದೂರಿದ್ದಾರೆ. ಇದಕ್ಕೆ ಉತ್ತರಿಸಿರುವ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ , " ಈ ಘಟನೆ ಬಗ್ಗೆ ವೈಯಕ್ತಿಕ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ" ಭರವಸೆ ನೀಡಿದ್ದಾರೆ.
ಲಿಖಿತ್ ರೈ ಟ್ವೀಟ್ ಮೂಲಕ ನೀಡಿರುವ ದೂರು ಹೀಗಿದೆ -
'ನಾನು ಹಾಗೂ ನನ್ನ ಸ್ನೇಹಿತರು ಕಳೆದ ರಾತ್ರಿ ( ಜೂ.21) ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಎಟಿಎಂಗಾಗಿ ಹುಡುಕಾಡುತ್ತಾ ಫುಟ್ಟಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದಕ್ಕಿದ್ದಂತೆ ದೆಹಲಿ ನೋಂದಾಯಿತ ಸಿಲ್ವರ್ ಬಣ್ಣದ ಕಾರೊಂದು ಅತಿವೇಗದಲ್ಲಿ ಬಂದು ಉದ್ದೇಶಪೂರ್ವಕವಾಗಿ ನಮಗೆ ಢಿಕ್ಕಿ ಹೊಡೆಯುವಂತೆ ಮಾಡಿದೆ. ಈ ಸಂದರ್ಭ ನಾವೆಲ್ಲ ಪಕ್ಕಕ್ಕೆ ಹಾರಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ನಮ್ಮ ಎಡಭಾಗಕ್ಕೆ ಉಜ್ಜಿಕೊಂಡು ಹೋಗಿದ್ದು ಎಡಗೈಗೆ ಗಾಯವಾಗಿದೆ.
ಆದರೆ ಈ ಬಗ್ಗೆ ನಾವು ತಡರಾತ್ರಿಯೇ ತೆರಳಿ ಉರ್ವ ಠಾಣೆಗೆ ದೂರು ನೀಡಲು ಹೋದರೆ, ಅಲ್ಲಿನ ಕರ್ತ್ಯವ ನಿರತ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. " ಮಾತ್ರವಲ್ಲದೆ ನಗರದಲ್ಲಿ ಈ ರೀತಿಯ ಘಟನೆಗಳೆಲ್ಲ ಸಾಮಾನ್ಯವಾಗಿದ್ದು, ರಾತ್ರಿ ಹೊತ್ತು ಹೊರಗಡೆ ತಿರುಗಾಡಬಾರದೆಂದು ಉತ್ತರಿಸಿ ವಾಪಾಸ್ ಕಳುಹಿಸಿದ್ದಾರೆ. ಇದರಿಂದ ನಾವು ತುಂಬಾ ನಿರಾಶೆಗೊಂಡಿದ್ದೇವೆ '' ಎಂದು ಆರೋಪಿಸಿ ಲಿಖೀತ್ ರೈ ಆಯುಕ್ತರಿಗೆ ಟ್ವೀಟ್ ಮಾಡಿದ್ದರು.