ಬ್ರಹ್ಮಾವರ, ಜು. 24 (DaijiworldNews/AA): ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಬಾರ್ಕೂರು ಜುಲೈ 23 ರಂದು ನಿಧನರಾಗಿದ್ದಾರೆ.

ಸತೀಶ್ ಪೂಜಾರಿ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಹ್ಮಾವರ ತಾಲೂಕು ರಚನೆಗಾಗಿ ಸತೀಶ್ ಪೂಜಾರಿ ಅವರು ನಿರಂತರ ಹೋರಾಟ ನಡೆಸಿದ್ದರು.
1975ರ ಏಪ್ರಿಲ್ 1ರಂದು ಹನೆಹಳ್ಳಿ ಸಮೀಪದ ಮೂಡುಕೆರೆಯಲ್ಲಿ ಜನಿಸಿದ ಅವರು, ಉದ್ದಲ್ ಗುಡ್ಡೆಯಲ್ಲಿರುವ ನ್ಯಾಷನಲ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಳಿಕ ನ್ಯಾಷನಲ್ ಜೂನಿಯರ್ ಕಾಲೇಜು ಬಾರ್ಕೂರಿನಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಣ ಪಡೆದರು.
ಸತೀಶ್ ಪೂಜಾರಿ ಅವರಲ್ಲಿನ ನಾಯಕತ್ವ ಗುಣ ಮೊದಲಿಗೆ ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಗುರುತಿಸಲ್ಪಟ್ಟಿತು. ಅಲ್ಲಿ ಅವರು 1993-95ರ ಅವಧಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಎಲ್ಎಲ್ಬಿ ಓದುವಾಗ, 1995-96ರ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಸತೀಶ್ ಪೂಜಾರಿ ಅವರು ಹನೆಹಳ್ಳಿ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.