ಕುಂದಾಪುರ, ಜು. 23 (DaijiworldNews/AA):ಆನಿಗುಡ್ಡಿ ಒಡಿನೀಗೆ ಒಡ್ತಿ ಕಾಳಮ್ಮಂಗೆ
ನಾ ಮುಂಚೆ ಕೈಯ ಮುಕ್ಕಂತಿ|ಏನಂದ್ಹೇಳಿ
ಬಪ್ಪು ಇಗ್ನುಗಳ ತಡಿಹಾಕು||
ಇಂತಾ ಜಾನಪದ ಸಾಹಿತ್ಯ ಬಡಾಯ್ ಕಲ್ಯಾಣಪುರ ಹೊಳಿಯಿಂದ ಶುರುವಾಯ್ ತೆಂಕ್ಲಾಯ್ ಶಿರೂರು-ಭಟ್ಕಳದ ತನ್ಕ ನಮ್ ಕುಂದಾಪ್ರ ಭಾಷಿ ಮಾತಾಡು ಜನ್ರಿಪ್ಪ ಕುಂದನಾಡಿನ ಜಾನಪದ ಹಾಡುಗರ್ತಿಯರ್ ಬಾಯಲ್ ಹರಿದಾಡ್ತಿತ್.


ಹಿಂದಕ್ಕೊಬ್ಬಳ್ ನೆಂಟ್ರ್ ಮನಿಗ್ ಬಂದಾಗ್ಲಿಕೆ-
ಕೂಕಣಿ ನೆಂಟರೇ ಕೂಳಿಗಕ್ಕಿಲ್ಲ
ನಾ ತೊಳು ಬತ್ತು ನಂದಲ್ಲ|ನೆಂಟರೇ
ಹೊತ್ತೋಪು ಮುಂಚೆ ಹೊಳಿದಾಟಿ||
ಎಂದ್ ಹಾಡ್ತಾ ತನ್ನ್ ದೈನೇಸಿ ಸ್ಥಿತಿ ಹೇಳ್ಕಂಡ್ರೆ,
ಬಾಯಾರಿ ಬಂದರೀಗೆ ಬಾವಿಯ ತೋರಿಸಿ
ಸೇದುವ ಹಗ್ಗ ಕೊಡಪಾನ|ಕೊಟ್ಟೀರು
ಕಾಶಿಗ್ಹೋದಷ್ಟೇ ಫಲ ಬಕ್ಕು||
ಅಂತ ಹಾಡಂಗೆ ಅವ್ಳಿಗೆ ಧರ್ಮದ ದಾರಿಯನ್ನು ತೋರಿಸ್ತಾ ನಿಂಗೆ ಬುದ್ದಿ-ಗಿದ್ದಿ ಇತ್ತಾ ಇಲ್ಯಾ, ಮನಿಗ್ ಬಂದ್ ನೆಂಟಿಷ್ಟ್ರಿಗೆ ಹಾಂಗೆಲ್ಲಾ ಹೇಳುಕಾಗ ಅಂತಿದ್ರ್.
ಇತ್ಕಾಣಿ...'ಬುದ್ದಿ-ಗಿದ್ದಿ' ಅಂದ್ಹಂಗೆ ಉಳದ್-ಪಳದ್, ಗುರ್ತ್-ಪರ್ತ್, ಸುಳ್ಳಂಬಳ್ಳಿ, ಹೊಕ್ಕ್-ಮುಕ್ಕ್, ಇಳಾಲ್-ಬಳಾಲ್, ನಾಚ್ಕಿ-ಪಾಚ್ಕಿ, ಹುಟ್ಟ್-ಕಟ್ಟ್, ದರಿ-ಗಿರಿ ಹೀಂಗೆ ಮಸ್ತ್ ಜೋಡಿಪದ ನಮ್ ಕುಂದಾಪ್ರ ಕನ್ನಡದಲ್ ನಿಮ್ಗೆ ಸಿಕ್ಕತ್ತ್.
ದಾರಿಯ ಕಂಡ್ಕಣ್ಣ್ ದಾಸಾನಾ ಹೂಗಾದೋ
ಏ ಶಿವ್ನೇ ಮಗುವೆ ಬರಲಿಲ್ಲ|ಕಣ್ಣೀರು
ಹಾಸೂಗಿ ಅದ್ದಿ ಹಸಿ ಅದ್ದಿ||
ಹೆತ್ತಬ್ಬಿ ಆಸಿ ಮಾಡ್ವಂಗೆ ಮತ್ಯಾರೂ ಮಾಡ, ಬರ್ದಿದ್ದ್ ಮಗೀನ ಹಾದಿ ಕಂಡ್ ಕಂಡ್ ಎಥಿ ಬಿಟ್ಟ್ ಕಣ್ ಕೆಂಪಾಯ್ತ್ ಅಂಬುಕೆ ದಾಸಾನಾ ಹೂಗಾದೋ ಅಂದ್ರೆ
ಪರಕ್ಕಾ ಹರ್ದಾ, ಹೈಂತ್ಕ ಕೂಕಂಡ, ಪಚಾಲ ಚೆಲ್ದ, ಟಪ್ಪ ಉತ್ರಕೊಟ್ಟ, ಬಡಾಲ ಬಿದ್ದ, ಗುಳುಂ ನುಂಗ್ದ, ಕಿಸಕ್ಕ ನಗಾಡ್ದ, ದಡಾರ ಬಾಗ್ಲ್ ಹಾಕ್ದ ಹೀಂಗಿದ್ದ್ ಕ್ರಿಯಾವಿಶೇಷಣ್ವನ್ನೂ ಸೇರ್ಸ್ಕಂಡ್ ಮಾತಾಡ್ತ್ರ್ ಕಾಣಿ ನಮ್ ಕುಂದಾಪ್ರ ಕನ್ನಡದಂಗೆ.
"ಕುಂಬಾರನಿಗ್ಯಾತಕೆ ಗೊಂಬಿಮಾಟದ ಹೆಣ್ಣು
ಕಡಿ ಎಂಬ ಮಣ್ಣ ಬನಿ ಎಂಬ ಮಜ್ಜ್ಯಾನ
ಹೊತ್ತು ಮಾರೆಂಬ ಕೊಡಗಡಗಿ"
ಈ ತ್ರಿಪದಿಯಂಗೆ ಗೊಂಬಿಗೆ ಹೋಲಿಕೆ ಮಾಡಿ ಹೆಣ್ಮಕ್ಕಳ ಚೆಂದುನ್ ವರ್ಣಿನಿ ಮಾಡಿರ್ ನಮ್ಮ ಹಾಡುಗರ್ತಿಯರ್.
ಹೀಂಗಿದ್ದೂ ಕೇಂಡಿಪ್ರಿ....ಚೆಂದ ಇದ್ರೆ ಚೆಂದ ಗ್ವಾಂಪಿ ಅಂಬುದ್, ಕುತ್ಗಿ ಉದ್ದಕಿದ್ರೆ ಕೊಕ್ಕನಕ್ಕಿಮ್ಯಾಳಿ ಅಂಬುದ್, ಕಣ್ಣ್ ದೊಡ್ಕಿದ್ರೆ ದ್ವಾಳ್ ಕಣ್ಣ್ ಅಂಬುದ್, ಸಪೂರಕಿದ್ರೆ ಒಡ್ಕಟಿ ಪ್ರ್ಯಾತು ಅಂಬುದ್, ಮೈಬಣ್ಣು ಕಪ್ಪಿದ್ರೆ ಕರಿ ಕರಿ ಕಾಳಿ ಅಂಬುದ್, ಉದ್ದಕಿದ್ರೆ ಜಾಂಟಿಕಾಲ್, ದಪ್ಪಗಿದ್ರೆ ಗೆಂಡಿಪುತ್ತಳಿ ಅಂಬುದೇ ಕುಂದಾಪ್ರ ಕನ್ನಡದ ಭಾಷಾ ವಿಶೇಷತೆ.
"ಹೊತ್ತು ಬೈ ಬೈ ಆದೋ, ಕಿಚ್ಚು ಪಿಣಿ ಪಿಣಿಯಾದೋ
ಮಕ್ಕಳ ತಾಯಿ ಎದಿಗೂದಿ ಸೂಲ್ಯಮ್ಮ
ಇಂದೈದೆ ಗಳಿಗೆ ನಿಲಬೇಕು"
ಇಲ್ ಬೆಂಕಿ ಚಣ್ಣಕೆ ಉರಿಯುಕೆ ಪಿಣಿ ಪಿಣಿ ಅಂದ್ಹಂಗೆ ಗಾಳಿಬೀಸು ಶಬ್ದಕ್ಕೆ ಸುಂಯ್ ಸುಂಯ್, ಹೊಳು ಕೆಂಡಕ್ಕೆ ನಿಗಿನಿಗಿ, ರಗ್ಳೆ ಮಾಡಿರೆ ಚಿರಿಚಿರಿ, ಗಂಟ್ಲ್ ಕೆಟ್ರೆ ಕಿಚಿಕಿಚಿ, ಬಿಡ್ದೆ ಹೊಡುಕೆ ರಪರಪ, ಗಡಿಬಿಡಿಗೆ ಥೈ ಥೈ, ಉರುಕೆ ಬುಗುಬುಗು, ಸೊರುಕೆ ಬಳಬಳ ಅಂತ್ರ್ ಕಾಣಿ ನಮ್ ಕುಂದಾಪ್ರ ಕನ್ನಡದಲ್.
ಕಂಚಿಕಾಯ್ ಕೈಂಯ್ ಅಂಬ ಲಿಂಬಿಕಾಯ್ ಹುಳಿ ಎಂಬ
ಮಾವಿನಕಾಯಿ ಸೊನಿ ಎಂಬ|ಬಾಲಯ್ಯ
ಮಾವನ ಮಗಳೇ ತನಗೆಂಬ||
ಇಲ್ ಬಾಲಯ್ಯನ ಬಾಯ್ ಸೊಗ್ಡ್ ಕೇಂತಾ ಹಂಬ್ಲಾತ್ತ್ ಕಾಣಿ, ಅಡ್ಗಿ ಮಾಡ್ವತಿಗೆ ರುಚಿ ಅತ್ತಿತ್ತ್ ಆರೆ... ಖಾರ ಕಿಚ್ಚ್, ಸೀ ಸೀ ಗುಳ್ಳ, ಉಪ್ಪಿನ್ ಇಸೋ, ಕೈಂಯ್ ಚಿಪ್ಳ್ ಕಾಯಿ, ಚಪ್ಪನ್ ಚಾರ್, ಹುಳಿ ಹುಳಿ ಹಪ್ಪ್, ಕಿರ್ ಕೈಂಯ್, ಖಾರ ಕಟ್ಟಂಗೆ, ಕೈಂಯ್ಗೋರ್ ಅಂಬುದ್ ಕುಂದಾಪ್ರ ಭಾಷಿಯ ಗುಣವಿಶೇಷಣಗಳ ಗಮ್ಮತ್ತ್.
"ರಾಕೆಸ್ತಿ ನನ ಮಾಯಿ, ರಣಭೂತು ನನ ಮಾವ
ಸೂರ್ಪಣಕಿ ನನ್ನ ಮೈದಿನಿ ಸಂಗಡ
ಹೆಂಗಿರಲಮ್ಮ ಅನುದಿನ"
ಅತ್ತಿ ಮಾವ ಕೊಡು ಕಷ್ಟು ಸೈಸೂಕಾಗ್ದೆ ಅಬ್ಬಿಕೈಲ್ ಹೆಣ್ಣೊಬ್ಳ್ ಬೇಜಾರ್ ತೋಡ್ಕಂತಾ ರಾಕೆಸ್ತಿ, ರಣಭೂತು ಅಂದ್ ಬೈದ್ರೆ ಕಲಿಕಣ್ಣ್, ಕೊರಾಜಿ, ಇಮ್ಮಂಡಿಹಾವ್, ಕುಂಟಿಕೋಣ, ಒಂಟ್ರ್ ಸುಂಟಿ, ರಠಾಳಿ, ಗಜ್ಬಾಯ್, ವರ್ಣಿನಿ, ಗಡಿಬಿಡಿ ಬಾಗ್ವೊತ ಅಂದ್ ಬೈದ್ರೆ ಕೇಂಬುಕೆ ಗಮ್ಮತ್ತ್ ಅನ್ಸತ್ತ್.
ಹಾಂಗಂದ್ಹೇಳಿ, ಕುಂದಾಪ್ರ ಭಾಷಿ ಬರೀ ಗಮ್ಮತ್ತಿಗಿಪ್ಪು ಭಾಷಿ ಅಂದ್ ಗ್ರೈಸ್ಬೇಡಿ...ಬಗೀತಾ ಹೋರೆ ನಮ್ ಕುಂದಾಪ್ರ ಕನ್ನಡದಲ್ ಅದೆಷ್ಟೋ ಜಾನಪದ ಹಾಡಿತ್ತ್, ಅಪೂರ್ವ ಪದಗಳಿತ್ತ್, ಅನುಭವದ ಮಾತಾದ ಆದ್ಗತಿಗಳಿತ್ತ್.
ಮಳಿರಾಯ ಹೊಯ್ಯಲಿ, ಕೆರಿರಾಯ ತುಂಬಲಿ
ಹನ್ನೆಯ್ಡು ಕೋಡಿ ಹರಿಯಲಿ -ನಮ್ಮೂರ
ಚಣ್ಣಕ್ಕಿ ಬಯಲು ಬೆಳೆಯಲಿ ......
ಎಂಬಂತೆ ನಮ್ ಕುಂದಾಪ್ರ ಕನ್ನಡವೂ ಎಲ್ಲಾ ಬದಿ ಕೇಂಡ್ ರ್ಲಿ ಆಯ್ತ್, ಎಲ್ಲರ್ ಬಾಯಂಗೂ ಮಾತಾಯ್ಲಿ, ಕಣ್ಮಾಯ್ಕ ಆಗ್ದೆ ಉಳೀಲಿ ಬೆಳೀಲಿ.
- ಸುಪ್ರೀತಾ ಪುರಾಣಿಕ್, ಹವ್ಯಾಸಿ ಬರಹಗಾರರು, ಕಲಾವಿದೆ, ಕುಂದಾಪುರ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ