ಉಡುಪಿ, ಜು. 25 (DaijiworldNews/AA): ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿ ರಚಿಸುವ ಸಲುವಾಗಿ ನಗರದ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ 'ನಶೆಯಿಂದ ಉಷೆಯೆಡೆ'ಗೆ ಕಾರ್ಯಕ್ರಮ ಜುಲೈ 24ರಂದು ಜರುಗಿತು.





ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಪೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಘೀಸ್ ಬಿ, ಉಡುಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರ್ಷಾ ಪ್ರಿಯಂವಧಾ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ, ಮತ್ತು ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್ ಅವರು ಮತ್ತು ಮಾದಕ ವಸ್ತು ಸಂಬಂಧಿತ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ಪ್ರಸ್ತುತ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಮಾದಕ ವ್ಯಸನದ ಬಲೆಗೆ ಬೀಳುವುದನ್ನು ತಡೆಯಲು ಕಾಲೇಜು ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ನಡುವೆ ನಿರಂತರ ಸಮನ್ವಯದ ಅಗತ್ಯವಿದೆ ಎಂದು ತಿಳಿಸಿದರು.
ಪ್ರಾಂಶುಪಾಲರು, ಇಬ್ಬರು ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿಗಳನ್ನು ಒಳಗೊಂಡಿರುವ ಮಾದಕ ವಸ್ತು ವಿರೋಧಿ ಸಮಿತಿಯನ್ನು ಪ್ರತಿ ಕಾಲೇಜು ರಚಿಸಬೇಕು. ಕಾಲೇಜುಗಳು ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೋ ಆ ಠಾಣೆಗಳ ಪಿಐ ಅಥವಾ ಎಸ್ಐ ಸಮಿತಿಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ತಿಂಗಳು ಈ ಸಮಿತಿಯ ಮಾಸಿಕ ಸಭೆ ನಡೆಸಬೇಕು. ಆ ಸಭೆಗೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕರೆಸಬೇಕು. 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯನ್ನು ಸಭೆಗೆ ಕರೆಸಬೇಕು. ಕಾಲೇಜಿನಲ್ಲಿ ತಿಂಗಳಿಗೊಮ್ಮೆ ಸಣ್ಣ ಮಟ್ಟದಲ್ಲಾದರೂ ಮಾದಕ ವಸ್ತು ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಮಾದಕ ವಸ್ತು ವಿಷಯಕ್ಕೆ ಸಂಬಂಧಿಸಿ ಕಾಲೇಜುಗಳಿಂದ ನೀಡುವ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಕಾಲೇಜುಗಳು ಅಥವಾ ವಿದ್ಯಾರ್ಥಿಗಳ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಎಸ್ಪಿ ಭರವಸೆ ನೀಡಿದರು.
ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರು ಸ್ವಾಗತ ಭಾಷಣ ಮಾಡಿದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯಕ್ ಅವರು ವಂದನಾರ್ಪಣೆ ಮಾಡಿದರು.