ಕಾಸರಗೋಡು, ಜು. 25 (DaijiworldNews/AA): ರಾಷ್ಟ್ರೀಯ ಹೆದ್ದಾರಿಯ ಕಾಞಂಗಾಡ್ ಸೌತ್ ನಲ್ಲಿ ಗುರುವಾರ ಅಪಘಾತಕ್ಕೀಡಾದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಕಂಡುಬಂದಿದೆ. ಈ ಹಿನ್ನೆಲೆ ಪರಿಸರದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.






ಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳೂರಿನಿಂದ ಸ್ಥಳಕ್ಕೆ ಆಗಮಿಸಿದ ತಜ್ಞರ ತಂಡವು ಸೋರಿಕೆ ತಡೆಗಟ್ಟಲು ಕ್ರಮ ತೆಗೆದುಕೊಂಡಿದೆ. ಸಂಪೂರ್ಣವಾಗಿ ಸೋರಿಕೆ ತಡೆಗಟ್ಟಿದ ಬಳಿಕ ಇನ್ನೊಂದು ಟ್ಯಾಂಕರ್ ಗೆ ಅನಿಲ ವರ್ಗಾಯಿಸಲಾಗುವುದು.
ಈ ಟ್ಯಾಂಕರ್ ಬೆಂಗಳೂರಿನಿಂದ ಕೊಯಮುತ್ತೂರಿಗೆ ಅನಿಲ ಸಾಗಾಟ ಮಾಡುತ್ತಿತ್ತು. ಬಸ್ಸಿಗೆ ಸೈಡ್ ನೀಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ಚಾಲಕ ತಮಿಳುನಾಡಿನ ಸುರೇಶ್ ಗಾಯಗೊಂಡಿದ್ದರು.
ಶುಕ್ರವಾರ ಬೆಳಿಗ್ಗೆ ಟ್ಯಾಂಕರ್ ನ್ನು ಮೇಲಕ್ಕೆತ್ತಲು ಯತ್ನಿಸುತ್ತಿದ್ದಾಗ ಸೋರಿಕೆ ಕಂಡುಬಂದಿದೆ. ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಕ್ರಮ ತೆಗೆದುಕೊಂಡರೂ ವಿಫಲ ಗೊಂಡಿತ್ತು. ನೀರು ಹಾಯಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಕಾಞಂಗಾಡ್ - ನೀಲೇಶ್ವರ ದಾರಿಯಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಯಿತು.
ಮುಂಜಾಗ್ರತಾ ಕ್ರಮವಾಗಿ ಕಾಞಂಗಾಡ್ ಸೌತ್ ನಿಂದ ಐಂಗೋತ್ ತನಕ ಶಾಲೆಗಳು ಹಾಗೂ ಸರಕಾರಿ ಸಂಸ್ಥೆ ಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗಿದೆ. ಸುಮಾರು ಒಂದು ಕಿ.ಮೀ ದೂರದ ತನಕ ಜನರ ಸಂಚಾರ ಹಾಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.