Karavali
ಮಂಗಳೂರು: ಅನಾರೋಗ್ಯದಿಂದ ಯುವ ಪ್ರತಿಭೆ ರಾಜಶ್ರೀ ಜೆ ಪೂಜಾರಿ ನಿಧನ
- Fri, Jul 25 2025 06:16:40 PM
-
ಮಂಗಳೂರು, ಜು. 25 (DaijiworldNews/AA): ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವ ಪ್ರತಿಭೆ ರಾಜಶ್ರೀ ಜೆ ಪೂಜಾರಿ(25) ಅವರು ನಿಧನರಾಗಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ರಾಜಶ್ರೀ ಜೆ ಪೂಜಾರಿ ಅವರು ಸಾಹಿತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರು ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ರಾಜಶ್ರೀ ಅವರು ಸರೋಜಿನಿ ಮತ್ತು ಜಯರಾಜ್ ದಂಪತಿಗಳ ಪುತ್ರಿಯಾಗಿ 2000ದ ಜನವರಿ 16 ರಂದು ಬಂಟ್ವಾಳದಲ್ಲಿ ಜನಿಸುತ್ತಾರೆ. ಬಂಟ್ವಾಳದಲ್ಲಿ 4ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆಯುತ್ತಾರೆ. ಬಳಿಕ ಮುಂದೆ ಮಂಗಳೂರಿನ ಎಕ್ಕಾರಿನ ಸಮೀಪದ ಪೆರ್ಮುದೆಯಲ್ಲಿ ನೆಲೆಸಿದ ಅವರು, ಪ್ರೌಢಶಾಲಾ ಶಿಕ್ಷಣದವರೆಗೆ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ಪಡೆಯುತ್ತಾರೆ. ಪದವಿಪೂರ್ವ ಶಿಕ್ಷಣವನ್ನು 2017 ರಲ್ಲಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಪಡೆದುಕೊಂಡರು. ನಂತರ ರಾಜಶ್ರೀ ಅವರು ತಮ್ಮ ಐದು ವರ್ಷದ ಕಾನೂನು ಶಿಕ್ಷಣವನ್ನು ಮಂಗಳೂರಿನ ಪ್ರತಿಷ್ಠಿತ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಪಡೆದುಕೊಂಡರು. ಇದೀಗ ಎರಡು ವರ್ಷದಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದರು.
ಬಾಲ್ಯದಿಂದಲೂ ರಾಜಶ್ರೀ ಅವರು ಓದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದಿನಪತ್ರಿಕೆ, ಮಾಸಪತ್ರಿಕೆ, ತುಂತುರು, ಬಾಲಮಂಗಳ, ಗಿಳಿವಿಂಡು, ಮಂಗಳ, ತುಷಾರ, ಸುಧಾ ಮತ್ತು ಕಥೆ, ಕಾದಂಬರಿ ಪುಸ್ತಕ ಇತ್ಯಾದಿ ಪುಸ್ತಕಗಳನ್ನು ಓದುವ ಅಭ್ಯಾಸ ಹೊಂದಿದ್ದರು. ಅದೇ ಅಭ್ಯಾಸ ಇಂದು ಕತೆ, ಪ್ರಬಂಧ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹುಮಾನ ಪಡೆಯಲು ಸಹಾಯ ಮಾಡಿತು.
ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ರಾಜಶ್ರೀ ಅವರು ಶಾಲೆಯ ಇಂಟರಾಕ್ಟ್ ಘಟಕದ ನಾಯಕಿಯಾಗಿದ್ದರು. ಪ್ರಬಂಧ, ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. ರಾಜಶ್ರೀ ಅವರು ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಪುತ್ತೂರು ಇವರು ನೀಡುವ ಕನ್ನಡ ಕುವರಿ ಪ್ರಶಸ್ತಿ - 2015 ಮತ್ತು ಗಡಿನಾಡ ಧ್ವನಿ ಕನ್ನಡ ಮಾಸಪತ್ರಿಕೆ ಆರ್ಲಪದವು ಇವರು ನೀಡುವ ಕನ್ನಡ ಧ್ವನಿ ಪ್ರಶಸ್ತಿ - 2016 ಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ರಾಜಶ್ರೀ ಅವರು ತನ್ನ ಕಲಿಕೆ ಮತ್ತು ಇತರೆ ಸಾಹಿತ್ಯಿಕ ಹವ್ಯಾಸಗಳಿಂದ ಕಾಲೇಜಿನ ಶಿಕ್ಷಕರಿಗೂ ಪರಿಚಿತರಾಗಿದ್ದರು. ಕಾಲೇಜಿನಲ್ಲಿ ಕತೆ, ಪ್ರಬಂಧ, ಲೇಖನ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ಪಿಯುಸಿ ಯ ಎರಡು ವರ್ಷಗಳಲ್ಲೂ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜನ್ನು ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಪಿಯುಸಿಯಲ್ಲಿ ಬೆಸ್ಟ್ ಸ್ಟೋರಿ ರೈಟರ್ ಆಫ್ ಡಿ ಇನ್ಸ್ಟಿಟ್ಯೂಷನ್ ಎಂಬ ಪ್ರಶಸ್ತಿ ಕೂಡಾ ಅವರಿಗೆ ಲಭಿಸಿದೆ. ಓದಿನಲ್ಲಿಯೂ ಮುಂದಿದ್ದ ಅವರಿಗೆ ಹಲವಾರು ನಗದು ಬಹುಮಾನಗಳು ದೊರಕಿರುವುದು ಕೂಡ ಉಲ್ಲೇಖನಾರ್ಹ.
ಕಾನೂನು ವ್ಯಾಸಂಗ ಮಾಡುತ್ತಿದ್ದಾಗಲೂ ಕೂಡ ರಾಜಶ್ರೀ ಅವರು ತನ್ನ ಓದಿನೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿದರು. ಕಾಲೇಜಿನ ಮತ್ತು ಇತರೆ ಅನೇಕ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಗಳಲ್ಲಿ ನಿರೂಪಣೆಯನ್ನು ಮಾಡಿ ಜನಮನ್ನಣೆ ಗಳಿಸಿದ್ದರು. ಎಸ್ಡಿಎಂ ಕಾನೂನು ಕಾಲೇಜನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಮೆಚ್ಚುಗೆ ಗಳಿಸಿದ್ದರು.ರಾಜಶ್ರೀ ಅವರು ತುಳು ಪರಿಷತ್ ನ ಆಶ್ರಯದಲ್ಲಿ 2020 ರಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಮಾಡಿದ್ದರು. ಕಾನೂನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ನಡೆದ ಎನ್ಎಸ್ಎಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಎಸ್ಡಿಎಂ ಕಾನೂನು ಕಾಲೇಜಿನಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಅಂಬೇಡ್ಕರ್ ಅವರ ಪುಸ್ತಕದ ಕುರಿತು ನಡೆಸಿದ ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು.
ರಾಜಶ್ರೀ ಅವರು ಅನೇಕ ಕಡೆ ಸ್ಪರ್ಧೆ ಹಾಗೂ ವಿಚಾರ ಕಮ್ಮಟ, ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವವಾಹಿನಿ (ರಿ) ಕೇಂದ್ರ ಮಂಗಳೂರು ಮತ್ತು ಯುವವಾಹಿನಿ (ರಿ) ಕೂಳೂರು ಘಟಕದ ಆಶ್ರಯದಲ್ಲಿ ನಡೆದ ಯೂತ್ ಫೆಸ್ಟ್ ನಲ್ಲಿ ಅಮರ್ ಬೊಳ್ಳಿಲು ವಿಶೇಷ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದು ಅಮರ್ ಬೊಳ್ಳಿಲು ಪ್ರಶಸ್ತಿ ಪಡೆದುಕೊಂಡಿದ್ದರು. ಮಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಲವಾರು ಕಡೆ ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳ ಕವಿಗೋಷ್ಠಿ, ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.
ರಾಜಶ್ರೀ ಅವರು 2020 ರಲ್ಲಿ ದಾಯ್ಜಿವರ್ಲ್ಡ್ ಸುದ್ದಿ ವಾಹಿನಿಯಲ್ಲಿ ಕಂಬಳ ಕ್ಷೇತ್ರದ ಖ್ಯಾತ ಉದ್ಘೋಷಕರಾದ ಕಂಗಿನಮನೆ ವಿಜಯಕುಮಾರ್ ಅವರೊಂದಿಗೆ ಕಂಬಳ ಕಹಳೆ ವಿಶೇಷ ಕಾರ್ಯಕ್ರಮದಲ್ಲಿ ವಿಷಯ ಮಂಡನೆಯಲ್ಲಿ ಪಾಲ್ಗೊಂಡಿದ್ದರು. ರಾಜಶ್ರೀ ಅವರು ಉರ್ವದ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದೊಂದಿಗೆ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ಕಲೆಗೆ ಸಂಬಂಧಿಸಿದ ರಸಪ್ರಶ್ನೆಯನ್ನು ನೆರವೇರಿಸುವಲ್ಲಿ ಜೊತೆ ಕ್ವಿಜ್ ಮಾಸ್ಟರ್ ಆಗಿ ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಮಾಡಿದ್ದರು. ರಾಜಶ್ರೀ ಅವರು ಬುಕ್ ಬ್ರಹ್ಮ ನಡೆಸಿದ್ದ ಜನ ಮೆಚ್ಚಿದ ಕತೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದರು.ರಾಜಶ್ರೀ ಅವರು ಮಂಗಳೂರು ಆಕಾಶವಾಣಿಯಲ್ಲಿ ಸ್ವರಚಿತ ಕತೆ, ಕವನ ವಾಚನ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ತುಳು ಪರಿಷತ್ ಮಂಗಳೂರು ಇಲ್ಲಿ 2019 ರಿಂದ ಸಕ್ರಿಯ ಸದಸ್ಯರಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ಶನಿವಾರ ಸಂಜೆ 5 ಗಂಟೆಗೆ 'ಕತೆತ ಕದಿಕೆ' ಎಂಬ ಚೆಂದದ ಶೀರ್ಷಿಕೆಯಡಿಯಲ್ಲಿ ತುಳು ಕತೆ ವಾಚನವನ್ನು ನೀಡುತ್ತಾ ಬಂದಿದ್ದರು. ಅದರೊಂದಿಗೆ ತುಳು ನಾಡಿನ ಸಂಸ್ಕೃತಿ, ಆಚಾರ - ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿಯನ್ನು ಹಿರಿಯ ಸಾಹಿತಿಗಳ ಜೊತೆಗೂಡಿ ವಿಚಾರವನ್ನು ಒಂದುಗೂಡಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡುತ್ತಾ ಬಂದಿದ್ದಾರೆ.
ರಾಜಶ್ರೀ ಅವರು ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸಮಯ ವ್ಯರ್ಥ ಆಗಬಾರದು ಮತ್ತು ತನ್ನಲ್ಲಿರುವ ಜ್ಞಾನವನ್ನು ಇತರರಿಗೂ ಹಂಚಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿದಿನ ನಡೆಸಿಕೊಂಡು ಬರುತ್ತಿದ್ದರು. 2020 ರಲ್ಲಿ ಮೊದಲ ಆವೃತ್ತಿಯ ಸಾಮಾನ್ಯ ರಸಪ್ರಶ್ನೆಯಲ್ಲಿ ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳ ರಸಪ್ರಶ್ನೆಯನ್ನು ನಡೆಸಿದ್ದರು. ಮುಂದಕ್ಕೆ 2021 ರಲ್ಲಿ ಎರಡನೇ ಆವೃತ್ತಿಯ ರಸಪ್ರಶ್ನೆಯಲ್ಲಿ ಪುರಾಣ, ಸಾಹಿತ್ಯ, ಕ್ರೀಡೆ, ತುಳುನಾಡು ಮತ್ತು ತುಳು ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳ ರಸಪ್ರಶ್ನೆಯನ್ನು ನಡೆಸಿದ್ದರು. ಪ್ರತಿಯೊಂದು ಆವೃತ್ತಿಯಲ್ಲಿಯೂ ದಿನಕ್ಕೊಂದರಂತೆ 100 ದಿನದ ರಸಪ್ರಶ್ನೆಯನ್ನು ತುಂಬಾ ಯಶಸ್ವಿಯಾಗಿ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಈಗ ಸಾಮಾನ್ಯ ರಸಪ್ರಶ್ನೆಯ ಮೂರನೇ ಆವೃತ್ತಿಯೂ ಯಶಸ್ವಿಯಾಗಿ ಮೂಡಿಬರುತ್ತಿದೆ.
ರಾಜಶ್ರೀ ಅವರು ಬರೆದ ಅನೇಕ ಕತೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ಇತ್ಯಾದಿ ಉದಯವಾಣಿ, ವಿಜಯವಾಣಿ, ಜಯಕಿರಣ, ವಿಶ್ವವಾಣಿ, ತುಳುನಾಡು ವಾರ್ತೆ, ಪ್ರಜಾವಾಣಿ ಹೀಗೆ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ಸಾಹಿತ್ಯ ಹಬ್ಬ - 2019 ರಲ್ಲಿ ವಿದ್ಯಾರ್ಥಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುತ್ತಾರೆ. ಆಗಸ್ಟ್ 2024 ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿಯೂ ಪ್ರತಿನಿಧಿಯಾಗಿ ಭಾಗವಹಿಸಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 40 ಕ್ಕೂ ಅಧಿಕ ಸಾಹಿತ್ಯ ಮತ್ತು ಸಭಾ ಕಾರ್ಯಕ್ರಮಗಳ ವೇದಿಕೆಗಳಲ್ಲಿ ನಿರೂಪಣೆಯನ್ನು ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಸುಮಾರು 62 ಕ್ಕೂ ಹೆಚ್ಚಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಹಲವೆಡೆ ಬಹುಮಾನ ಪಡೆದಿದ್ದಾರೆ. ಅವರ ಕನ್ನಡ ಕಥೆಗಳ ಸಂಗ್ರಹಣೆಯ ಹಸ್ತಪ್ರತಿಯಯು ಬಿಡುಗಡೆಗೆ ತಯಾರಿಯಲ್ಲಿದೆ ಮತ್ತು ತುಳು ಕತೆಗಳ ಸಂಕಲನದ ಹಸ್ತಪ್ರತಿಯ ಪುರಾವೆ ಓದುವಿಕೆಯ ಹಂತದಲ್ಲಿದೆ.ರಾಜಶ್ರೀ ಅವರು ತುಳು ಪರಿಷತ್ ಮಂಗಳೂರು, ಮಕ್ಕಿಮನೆ ಕಲಾವೃಂದ ಮಂಗಳೂರು, ಸಾಹಿತ್ಯಾಸಕ್ತರ ಬಳಗ ಮೈಸೂರು, ಸಾಹಿತ್ಯ ಸಿಂಚನ ಬರಹಗಾರರ ಬಳಗ, ಇಂಚರ ಕಲಾವಿದರು, ಸುಂಕದಕಟ್ಟೆ ಬಜ್ಪೆ ಇತ್ಯಾದಿ ವೃಂದಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಶ್ರೀ ಅವರಿಗೆ ಕನ್ನಡ ಕುವರಿ ಪ್ರಶಸ್ತಿ, ಕನ್ನಡ ಧ್ವನಿ ಪ್ರಶಸ್ತಿ, ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ.
ಪ್ರಸ್ತುತ ರಾಜಶ್ರೀ ಅವರು ಮಂಗಳೂರಿನ ಖ್ಯಾತ ವಕೀಲರಾದ ಜಗದೀಶ್ ಕೆ ಆರ್ ಮತ್ತು ಪ್ರಸಾದ್ ಅವರೊಂದಿಗೆ ವಕೀಲೆಯಾಗಿ ವೃತ್ತಿ ನಡೆಸುತ್ತಿದ್ದರು. ಪುಸ್ತಕ ಓದಲು ಪ್ರಾರಂಭ ಮಾಡಿದಾಗಿನಿಂದ ಇಂದಿನವರೆಗೂ ರಾಜಶ್ರೀ ಅವರು ತಾನು ಓದಿದ ಎಲ್ಲಾ ಪುಸ್ತಕಗಳ ಒಟ್ಟು ಅಂದಾಜು 1000ಕ್ಕಿಂತಲೂ ಮೀರಿದ ಪುಸ್ತಕಗಳ ಸಂಗ್ರಹಣೆ ಮಾಡಿದ್ದಾರೆ. ಕಠಿಣ ಶ್ರಮ ಮತ್ತು ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ರಾಜಶ್ರೀ ಅವರೇ ಸಾಕ್ಷಿ.