ಮಂಗಳೂರು, ಜೂ25(Daijiworld News/SS): ಎಚ್ಚರಿಕೆ ನೀಡಿ, ದಂಡ ವಿಧಿಸಿದ ಬಳಿಕವೂ ನಿಷೇಧಿತ ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಅಸ್ತ್ರ ಬಳಸಲು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ, ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿದ್ದಾರೆ.
ಜೂ.25ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಸೆಂಟ್ರಲ್ ಸಿಟಿ ಮಾರ್ಕೆಟ್'ನ ಹಲವು ಅಂಗಡಿಗಳ ಮೇಲೆ ಮನಪಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಾನೂನು ಬಾಹಿರವಾಗಿ ಮಾರಾಟ ಮಾಡಲು ದಾಸ್ತಾನಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್ ಸಾಮಾಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್ಗಳನ್ನು ಬಳಸುವುದು ಮತ್ತು ಮಾರಾಟ ಮಾಡಬಾರದು ಎಂದು ಇಲಾಖೆಗಳು ಹಲವು ಬಾರಿ ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಿದರೂ, ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ.