ಮಂಗಳೂರು, ಡಿ7: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಓಖಿ ಚಂಡಮಾರುತದ ಪ್ರಭಾವ ಮಾತ್ರ ಇನ್ನು ನಿಂತಿಲ್ಲ. ಓಖಿಯ ಹೊಡೆತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಮೀನುಗಾರರನ್ನು ಕೊನೆಗೂ ಭಾರತಿಯ ತಟರಕ್ಷಣಾ ಪಡೆ ರಕ್ಷಿಸಿ ದಡಕ್ಕೆ ಕರೆತಂದಿದೆ.
ಕೇರಳ ಮತ್ತು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು 'ಅಮಾರ್ಥ್ಯ' ಹೆಸರಿನ ಸ್ಪೀಡ್ ಬೋಟ್ ಮೂಲಕ 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಓಖಿ ಹೊಡೆತಕ್ಕೆ ಸಿಲುಕಿದ ಬಾರಕುಡ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ನ 7 ರಂದು ಕೇರಳದ ಕೊಚ್ಚಿಯಿಂದ ತೆರಳಿತ್ತು. ಆದರೆ ಓಖಿಯ ಅಬ್ಬರಕ್ಕೆ ಪ್ರಕ್ಷುಬ್ದಗೊಂಡ ಕಡಲ ಅಲೆಗಳಿಗೆ ಬೋಟ್ ಲಕ್ಷದ್ವೀಪದ ಬಳಿ ಮುಳುಗಡೆಯ ಹಂತ ತಲುಪಿತ್ತು,ಜತೆಗೆ ವೈರ್ ಲೆಸ್ ಕೂಡಾ ಕಡಿತಗೊಂಡಿತ್ತು. ದೇವರ ಮೇಲೆ ಭಾರ ಹಾಕಿದ ಸಿಬ್ಬಂದಿಗಳು ಹತಾಶರಾಗದೆ ಪಾತ್ರೆಗಳನ್ನು ಬಳಸಿ ಬೋಟ್ ನಲ್ಲಿದ್ದ ನೀರು ಹೊರಹಾಕಿದ್ದರು.. ಆಶಾಕಿರಣವೆಂಬಂತೆ ಒಮ್ಮಿಂದೊಮ್ಮೆಲೆ ವೈರ್ ಲೆಸ್ ಕೂಡ ಕ್ಷಣ ಕಾಲ ಸಂಪರ್ಕಕ್ಕೆ ಸಿಕ್ಕಾಗ ತಮ್ಮ ಪರಿಸ್ಥಿತಿ ಬಗ್ಗೆ ಕೇರಳದ ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನಿಸುವಲ್ಲಿ ಯಶಸ್ವಿಯಾದರು. ತಡಮಾಡದೆ ಕಾರ್ಯಚರಣೆ ನಡೆಸಿ ಕೋಸ್ಟ್ ಗಾರ್ಡ್ ಅಧಿಕಾರಿಗಳು ಕೋಸ್ಟ್ ಗಾರ್ಡ್ ನ ಅಮಾರ್ಥ್ಯ ಸ್ಪೀಡ್ ಬೋಟ್ ನಲ್ಲಿ ಎಲ್ಲಾ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಇವರೆಲ್ಲರೂ ತಮಿಳುನಾಡು, ಕೇರಳ,ಅಸ್ಸಾಂ ಮೂಲದ ಮೀನುಗಾರರಾಗಿದ್ದಾರೆ. ಇನ್ನು ತಮ್ಮೊಂದಿಗೆ ತಂದಿದ್ದ ಆಹಾರ ಮುಗಿದ ಕಾರಣ 4 ದಿನಗಳ ಕಾಲ ಹಸಿ ಮೀನು ತಿಂದು ನೀರು ಕುಡಿದು ಜೀವ ಉಳಿಸಿಕೊಂಡಿದ್ದರು. ಜೀವನ್ಮರಣ ಸ್ಥಿತಿಯಲ್ಲಿದ್ದ ಈ ಮೀನುಗಾರರನ್ನು ಮಂಗಳೂರಿನ ಎನ್ ಎಂಪಿಟಿ ಬಂದರಿಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬುಧವಾರ ಸಂಜೆ ತೀರಕ್ಕೆ ಕರೆತಂದಿದ್ದಾರೆ.