ಪುತ್ತೂರು : ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಕೆಎಸ್ಆರ್’ಟಿಸಿ ಬಸ್ ಚಾಲಕ
Tue, Jun 25 2019 04:06:04 PM
ಪುತ್ತೂರು, ಜೂ 25 (Daijiworld News/MSP): ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದರೂ ಇದ್ಯಾವುದನ್ನು ಗಮನಿಸಿಯೇ ಇಲ್ಲ ಎಂದು ಮುಂದೆ ಸಾಗುವ ಜನರು ಅದೆಷ್ಟೋ . ಇನ್ನು ಅಪ್ಪಿ ತಪ್ಪಿ ವಾಹನಗಳ ಆರ್ಭಟಕ್ಕೆ ಪ್ರಾಣಿಗಳು ಅಪಘಾತಗೊಂಡರೆ ಏನೂ ನಡೆದೇ ಇಲ್ಲದಂತೆ ಮತ್ತಷ್ಟು ವೇಗದಲ್ಲಿ ವಾಹನ ಚಲಾಯಿಸಿಕೊಂಡು ಸಾಗುವ ಜನರಿಗೂ ಕಮ್ಮಿ ಇಲ್ಲ. ಆದರೆ ಇದೆಲ್ಲವನ್ನು ಮೀರಿ "ದಯೆಯೇ ಎಲ್ಲಕ್ಕಿಂತ ಮಿಗಿಲು " ಎಂದು ಭಾವಿಸಿದ ಬೆಳ್ಳಾರೆ - ಪುತ್ತೂರಿನ ರೂಟ್ ನ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನೊಬ್ಬ ರಸ್ತೆ ಬದಿಯಲ್ಲಿ ನಡೆಯಲಾಗದೆ ಒದ್ದಾಡುತ್ತಿದ್ದ ಹಸುವೊಂದನ್ನು ರಕ್ಷಿಸಿದ್ದಾರೆ. ಈ ವಿಡೀಯೊ ಇದೀಗ ವೈರಲ್ ಆಗಿದೆ.
ಪುತ್ತೂರು ಸಮೀಪ ಈ ಘಟನೆ ನಡೆದಿದ್ದು ಸರ್ಕಾರಿ ಬಸ್ ಚಾಲಕನೊಬ್ಬ ಬಸ್ಸು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ಕಾಲುಗಳಿಗೆ ಸುತ್ತು ಬಿದ್ದು ಹಗ್ಗದಿಂದ ಬಂಧಿಯಾಗಿ ನಡೆಯಲಾಗದೆ ಒದ್ದಾಡುತ್ತಿದ್ದ ಹಸುವೊಂದನ್ನು ಗಮನಿಸಿದ್ದಾರೆ. ತಡ ಮಾಡದೇ ರಸ್ತೆ ಬದಿಯಲ್ಲಿ ಬಸ್ಸು ನಿಲ್ಲಿಸಿ ಗೋವನ್ನು ಬಂಧಮುಕ್ತಗೊಳಿಸಿ ತಮ್ಮ ಕರ್ತವ್ಯದ ನಡುವೆಯೂ ಪ್ರಾಣಿ ಪ್ರೇಮದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯನ್ನು ಪ್ರಯಾಣಿಕರೋರ್ವರು ಚಿತ್ರೀಕರಿಸಿದ್ದು, ಈ ವಿಡೀಯೊ ಇದೀಗ ವೈರಲ್ ಆಗಿದೆ.