ಬಂಟ್ವಾಳ, ಜು. 31 (DaijiworldNews/AA): ಕಳೆದ 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ(21)ನ ಪತ್ತೆಗಾಗಿ ಈಶ್ವರ ಮಲ್ಪೆ ಅವರ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ಡಿಆರ್ಎಫ್) ಬಂಟ್ವಾಳಕ್ಕೆ ಆಗಮಿಸಿ ನೇತ್ರಾವತಿ ನದಿ ತೀರದಲ್ಲಿ ಶೋಧ ಕಾರ್ಯ ನಡೆಸುತ್ತಿದೆ.




ಜು 27 ರಂದು ಹೇಮಂತ್ ನಾಪತ್ತೆಯಾಗಿದ್ದು, ಈ ಕುರಿತಾಗಿ ಜು.28 ರಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಜು.29 ರಂದು ಹೇಮಂತ್ ನ ದ್ವಿಚಕ್ರ ವಾಹನ ಜಕ್ರಿಬೆಟ್ಟುವಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಮೊಬೈಲ್ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ನೇತ್ರಾವತಿ ನದಿಯ ಬದಿಯಲ್ಲಿ ವಾಹನ ಇಟ್ಟು ನಾಪತ್ತೆಯಾಗಿದ್ದ ಕಾರಣಕ್ಕಾಗಿ ಮಂಗಳವಾರದಿಂದ ಸ್ಥಳೀಯ ಮುಳುಗು ತಜ್ಞ ನಿಸಾರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಗರ, ಗ್ರಾಮಾಂತರ ಪೊಲೀಸರ ತಂಡ ಹುಡುಕಾಟ ನಡೆಸಿದ್ದು, ನಿನ್ನೆಯೂ ಅಗ್ನಿಶಾಮಕದಳ ಶೋಧಕಾರ್ಯ ನಡೆಸಿದೆ. ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ದಳದವರು ನಡೆಸಿದ ಶೋಧ ಕಾರ್ಯದಲ್ಲಿ ಹೇಮಂತ್ ಬಗ್ಗೆ ಯಾವುದೇ ಸುಳಿವು ದೊರೆಯಲಿಲ್ಲ. ಗುರುವಾರ ಮಧ್ಯಾಹ್ನ ಬಳಿಕವೂ ಶೋಧ ಕಾರ್ಯ ಮುಂದುವರಿದಿದೆ.
ಈ ವೇಳೆ ಮಾತನಾಡಿದ ಈಶ್ವರದ ಮಲ್ಪೆ, ಹೇಮಂತ್ ನಾಪತ್ತೆಯಾಗಿದ್ದು, ಬದುಕುಳಿದಿದ್ದರೆ ಸಂತೋಷ, ನೀರಲ್ಲಿ ಮುಳುಗಿದ್ದರೆ ಬೇಗನೇ ಸಿಗಬೇಕು ಎನ್ನುವ ಕಾರಣಕ್ಕೆ ಶೋಧಕಾರ್ಯ ನಡೆಸುತ್ತಿದ್ದೇವೆ. ಇತ್ತೀಚೆಗಿನ ದಿನಗಳಲ್ಲಿ ಯುವ ಸಮೂಹ ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾಧನೀಯ. ದಯವಿಟ್ಟು ಇಂತಹ ಕೃತ್ಯ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಬಂಟ್ವಾಳ ಮಂಡಲದ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಬಿಜೆಪಿ ಪ್ರಮುಖರಾದ ರವಿಶಟ್ಟಿ ಕಾರ್ಕಳ, ಶಶಿಕಾಂತ್ ಶೆಟ್ಟಿ ಆರ್ಮುಡಿ, ಕಾರ್ತಿಕ್ ಬಲ್ಲಾಳ್, ಹರೀಶ್ ಶೆಟ್ಟಿ ಹಾಡು, ಕಡೆಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಸನತ್ ಆಳ್ವ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಸುವರ್ಣ ಅವರು ಸ್ಥಳದಲ್ಲಿ ಉಪಸ್ಥಿತರಿದ್ದು, ಕಾರ್ಯಾಚರಣೆಗೆ ಸಹಕಾರ ನೀಡಿದರು.