ಬಂಟ್ವಾಳ, ಜು. 31 (DaijiworldNews/AA): ಭೂ ಒಡೆತನ, ಹಕ್ಕುಪತ್ರ ನಿವೇಶನ ಸಹಿತ ಜನಪರವಾದ ಅನೇಕ ಯೋಜನೆಗಳನ್ನು ಆರಂಭ ಮಾಡಿದ್ದೇ ಕಾಂಗ್ರೇಸ್ ಪಕ್ಷ. ಆದರೆ ಸುಳ್ಳು ಆರೋಪಗಳಲ್ಲೇ ಮುಳುಗಿರುವ ಬಿಜೆಪಿ ಧರ್ಮ ದೇಶ ಅಂತ ಹೇಳಿ ಹೀಗೆ ಬೇರೆ ರೀತಿಯಲ್ಲಿ ಜನರನ್ನು ಮೋಸ ಮಾಡಿ, ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.





ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಸಮಿತಿ, ಬಿ.ಮೂಡ ವಲಯ ಕಾಂಗ್ರೇಸ್ ಸಮಿತಿಯ ಆಶ್ರಯದಲ್ಲಿ ಬಿ.ಸಿ. ರೋಡಿನಲ್ಲಿ ಗುರುವಾರ ನಡೆದ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅವಧಿಯ ಚುನಾವಣಾ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಹಕ್ಕು ಪತ್ರ ನೀಡಿದೆ. ಬಿಪಿಎಲ್ ಕಾರ್ಡ್ ರದ್ದುಮಾಡಿ ಜನರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ. ಋಣಮುಕ್ತ ಕಾರ್ಯಕ್ರಮ ಮಾಡಿದ್ದೇ ಕಾಂಗ್ರೆಸ್ ಚರಿತ್ರೆಯಾಗಿದೆ, ಸರ್ಕಾರಗಳು ದಿವಾಳಿಯಾಗುವುದು ಬಡವರಿಗೆ ನೀಡುವ ಕಾರ್ಯಕ್ರಮಗಳಿಂದ ಅಲ್ಲ, ಬಂಡವಾಳ ಶಾಹಿಗಳಿಗೆ ಬ್ಯಾಂಕ್ ಸಾಲ ನೀಡಿ ಮನ್ನಾ ಮಾಡಿದ್ದೀರಿಲ್ಲ ನೀವು. ಅದರಿಂದ ದೇಶ ದಿವಾಳಿಯಾಗುವ ಸಾಧ್ಯತೆಗಳಿವೆ ಎಂದರು.
ಖ್ಯಾತ ನ್ಯಾಯವಾದಿ ಎಂ.ಜಿ.ಹೆಗ್ಡೆ ಮಾತನಾಡಿ, ಬಿಜೆಪಿ ಪಕ್ಷ ಹುಟ್ಟಿದ್ದು ಸುಳ್ಳಿನಿಂದ ಪಕ್ಷವನ್ನು ಕಟ್ಟಲು ಹಿಂದುತ್ವದ ಸುಳ್ಳು, ಹೀಗೆ ಅದು ಬಿಜೆಪಿ ಪರಂಪರೆಯಾಗಿದೆ. ಹಿಂದೂಗಳ ಮೇಲೆ ಲಾಠಿ ಪ್ರಹಾರ ಮಾಡುವುದು. ಹಿಂದೂಗಳಿಗೆ ಅನ್ಯಾಯ ಮಾಡುವ ಕಾನೂನು ಜಾರಿ ಮಾಡಿದ್ದು ಬಿಜೆಪಿ ನಾಯಕರು. ಅತ್ಯಂತ ಹೆಚ್ಚು ಹಿಂದೂ ಯುವಕರನ್ನು ಕ್ರಿಮಿನಲ್ ಮಾಡಿದ್ದು ಸಂಘ ಪರಿವಾರ. ಕಾಂಗ್ರೆಸ್ ಯಾವತ್ತೂ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೇರಣೆ ನೀಡಿಲ್ಲ. ಆದರೆ ಮೈಕ್ ನೀಡಿದರೆ ಕಲ್ಲಡ್ಕ ಪ್ರಭಾಕರ್ ಭಟ್ ಬೈಯುವುದು ರಮಾನಾಥ ರೈ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಬಿಜೆಪಿಯವರ ಕೋಮು ಅಂಗಡಿ ಬಂದ್ ಆಗಿದೆ. ಅಕ್ರಮ ದಂದೆಗಳಿಂದ ಬರುವ ದಾರಿಗಳನ್ನು ಮುಚ್ಚಿದೆ. ಸದ್ಯ ಕರಾವಳಿಯಲ್ಲಿ ಶಾಂತಿ ಇದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಪುತ್ತೂರಿನಲ್ಲಿ ಮದುವೆಗೆ ಮೊದಲೇ ಹಿಂದೂ ಯುವತಿಯ ಕೈಗೆ ಮಗುವನ್ನು ನೀಡಿದ ಬಿಜೆಪಿ ಮುಖಂಡನ ಮಗನ ಪ್ರಕರಣದ ಕುರಿತಾಗಿ ಬಿಜೆಪಿ ಉತ್ತರ ಕೊಡಲೇಬೇಕು. ಇದು ಯಾವ ಜಿಹಾದ್? ಬೇಟಿ ಬಚಾವೋ, ಬೇಟಿ ಪಡಾವೋ ಎಲ್ಲಿ ಹೋಗಿದೆ? ತಾಂಟ್ರೆ ಬಾ ತಾಂಟ್ರೆ ಮತ್ತು ತಾಂಟುವುದಾದರೆ ನಾವು ತಾಂಟುವುದು ಎನ್ನುವ ಎರಡು ಸಂಘಟನೆಗಳ ಜಗಳದಿಂದ ಮಂಗಳೂರು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಕೋಮು ಗಲಭೆಯಲ್ಲ. ಪರಸ್ಪರ ವಿರೋಧ ಭಾಷಣದ ಎರಡು ಸಂಘಟನೆಗಳ ನಡುವೆ ಗಲಾಟೆ ನಡೆಯುಯುತ್ತಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಕೆಡಿಪಿ ಸಭೆಯನ್ನು ಮಾಡದೆ, ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದಿರುವುದೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಾಧನೆ. ಹಾಗಾಗಿ ನೀವು ನಾಲಾಯಕ್ ಶಾಸಕ. ಕಳೆದ 5 ವರ್ಷಗಳ ಕಾಲ ಗಲಾಟೆ ಮಾಡಿಕೊಂಡು, ಆಳ್ವಿಕೆ ನಡೆಸಿದ ನಿಮಗೆ ಆ ಸಂದರ್ಭದಲ್ಲಿ ಗ್ರಾ.ಪಂ. ನೌಕರರ ಬಗ್ಗೆ ಯಾಕೆ ಮಾತನಾಡಬೇಕು ಎಂದು ಯಾಕೆ ಕಂಡಿಲ್ಲ. ರಾತ್ರೋ ರಾತ್ರಿ ಹಕ್ಕು ಪತ್ರ ನೀಡಿ ಮತ ಪಡೆದು ಗೆಲುವು ಸಾಧಿಸಿದ ನೀವು ಇದೀಗ ಪೋರ್ಜರಿ ದಾಖಲೆ ಸೃಷ್ಟಿ ಮಾಡಲು ಸಮಿತಿಯಲ್ಲಿ ಶಾಸಕರೋಬ್ಬರೇ ಇರಬೇಕಾ? ಎಂದು ಪ್ರಶ್ನಿಸಿದರು.
ಏಳು ವರ್ಷಗಳಿಂದ ಶಾಸಕರಾಗಿದ್ದೀರಿ, ನಿಮ್ಮ ಕೊಡುಗೆ ಏನು? ಕ್ರೈಂ ರೇಟ್ ಜಾಸ್ತಿ ಮಾಡಿದ್ದು, ಹಿಂದೂ ಮುಸ್ಲಿಂ ಸಮುದಾಯದ ನಡುವೆ ಗಲಾಟೆ ಮಾಡಿದ್ದು? ಇತ್ತೀಚಿಗೆ ಕೊಲೆಯಾದ ಸಾವಿನ ಮನೆಗೆ ಹೋಗಿ ಸಾಂತ್ವನ ನೀಡಲು ಧರ್ಮವನ್ನು ನೋಡುವ ಶಾಸಕ ರಾಜೇಶ್ ನಾಯ್ಕ ಅವರ ಶಾಸಕತ್ವದ ಅವಧಿಯಲ್ಲಿ ಅಭಿವೃದ್ಧಿ ಏನು? ಬಂಟ್ವಾಳ ತಾಲೂಕಿನ ಸುತ್ತ ಕಣ್ಣು ಹಾಯಿಸಿದರೆ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಕಾಣುತ್ತಿವೆ. ಸುಮಾರು 20 ಸಾವಿರ ಜನರಿಗೆ ಹಕ್ಕು ಪತ್ರ ನೀಡಿರುವ ಸಾಧನೆ ಬಿ.ರಮಾನಾಥ ರೈ ಅವರಿಗೆ ಸಲ್ಲುತ್ತದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಆಗಿರುವ ತಪ್ಪುಗಳನ್ನು ಕಾಂಗ್ರೇಸ್ ಹೆಗಲಮೇಲೆ ಹಾಕಬೇಡಿ ಎಂದು ಶಾಸಕರಿಗೆ ಸವಾಲೆಸೆದರು.
ಅಶ್ವನಿಕುಮಾರ್ ರೈ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ತುಂಬೆ, ಅಬ್ಬಾಸ್ ಅಲಿ, ನವಾಜ್ ಬಡಕಬೈಲ್, ಜಯಂತಿ ಎಸ್.ಪೂಜಾರಿ. ಬಿ.ಆರ್.ಅಂಚನ್, ಐಡಾಸುರೇಶ್, ಸುಭಾಶ್ಚಂದ್ರ ಶೆಟ್ಟಿ, ವಾಸುಪೂಜಾರಿ, ಸುದರ್ಶನ ಜೈನ್, ಲವಿನಾ ಮೋರಾಸ್, ಸಜ್ವಾನ್, ವಿನಯಕುಮಾರ್ ಸಿಂದ್ಯಾ, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಗಣೇಶ್ ಪೂಜಾರಿ, ಪದ್ಮಶೇಖರ್ ಜೈನ್, ಶ್ರೀಜಿತ್, ಸಂಜೀವ ಪೂಜಾರಿ, ವೆಂಕಪ್ಪ ಪೂಜಾರಿ ಪುರಸಭೆಯ ಸದಸ್ಯರು, ಗ್ರಾ.ಪಂ.ಅಧ್ಯಕ್ಷರುಗಳು, ಸದಸ್ಯರುಗಳು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ಜಗದೀಶ್ ಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.